ಬ್ರೆಜಿಲ್ನ ಗುಡ್ಡಗಾಡು ನಗರ ಪೆಟ್ರೊಪೊಲಿಸ್ ನಲ್ಲಿ ಭೂಕುಸಿತ | ಸಾವಿನ ಸಂಖ್ಯೆ 117 ಕ್ಕೆ ಏರಿಕೆ Saaksha Tv
ಬ್ರೆಜಿಲ್ : ಬ್ರೆಜಿಲ್ನ ಗುಡ್ಡಗಾಡು ನಗರ ಪೆಟ್ರೊಪೊಲಿಸ್ ನಲ್ಲಿ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಿಂದ ಸಾವಿನ ಸಂಖ್ಯೆ 117ಕ್ಕೆ ಏರಿಕೆಯಾಗಿದೆ.
ರಿಯೋ ದೆ ಜನೈರೋ ನಗರದ ಮೇಲೆ ಬೆಟ್ಟದಲ್ಲಿ ನೆಲೆಗೊಂಡಿರುವ ಜರ್ಮನ್ ಪ್ರಭಾವಿತ ನಗರದಲ್ಲುಂಟಾದ ಭೂಕುಸಿತ ಮತ್ತು ಪ್ರವಾಹದಿಂದ 116 ಜನರು ನಾಪತ್ತೆಯಾಗಿದ್ದಾರೆ, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ರಿಯೊ ದೆ ಜನೆರಿಯೋ ಸರಕಾರ ತಿಳಿಸಿದೆ.
ಪೆಟ್ರೊಪೊಲಿಸ್ ನಲ್ಲಿ ಬುಧವಾರ ಕೇವಲ ಮೂರು ಗಂಟೆಗಳಲ್ಲಿ 10 ಇಂಚಿಗೂ ಅಧಿಕ ಮಳೆಯಾಗಿದೆ. ಕಳೆದ ದು ತಿಂಗಳಲ್ಲಿ ಸುರಿದ ಮಳೆ ಪ್ರಮಾನವನ್ನೂ ಮೀರಿದ ಮಳೆ ಒಂದೇ ದಿನದಲ್ಲಿ ಸುರಿದಿದೆ. ಪರಿಣಾಮ ಅನೇಕ ಗುಡ್ಡಗಳು ಕುಸಿದು ಅದರ ಕೆಳಗಿದ್ದ ಮನೆಗಳೆಲ್ಲವೂ ಭೂಸಮಾಧಿಯಾಗಿವೆ. ಕನಿಷ್ಠ 20 ಮನೆಗಳು ಮಣ್ಣು ಪಾಲಾಗಿವೆ. ನೂರಾರು ವಾಹನಗಳು ನೀರಿನಲ್ಲಿ ಕೊಚ್ಚಿಹೋಗಿವೆ. 400ಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದಾರೆ.
ದಶಕಗಳಲ್ಲೇ ಕಂಡರಿಯದ ಭಾರಿ ಮಳೆಯ ಕಾರಣ ಉಂಟಾದ ಪ್ರವಾಹ ಮತ್ತು ಮಣ್ಣಿನ ಕುಸಿತಗಳು ನಗರದ ರಸ್ತೆಗಳಿಂದ ಕಾರ್ಗಳನ್ನು ಹಾಗೂ ಮನೆಗಳನ್ನು ಕೊಚ್ಚಿಕೊಂಡು ಹೋಗಿವೆ. ನದಿಯಲ್ಲಿ ಮುಳುಗುತ್ತಿರುವ ಬಸ್ಗಳ ಕಿಟಕಿಯಿಂದ ಹೊರಬಂದು ಜೀವವುಳಿಸಿಕೊಳ್ಳಲು ಜನರು ಹರಸಾಹಸಪಡುತ್ತಿದ್ದಾರೆ. ಕೆಲವರು ನದಿಯ ದಡ ಸೇರಲು ಸಾಧ್ಯವಾಗದೆ ಕೊಚ್ಚಿಹೋಗಿ ಕಣ್ಮರೆಯಾಗಿದ್ದಾರೆ.
ಕುಸಿದ ಮಣ್ಣಿನ ಅವಶೇಷಗಳಡಿ ಜನರು ತಮ್ಮವರನ್ನು ಹುಡುಕುತ್ತಿರುವ ದೃಶ್ಯ ಮನಕಲಕುವಂತಿದೆ. ಇಳಿಜಾರು ಪ್ರದೇಶವಾಗಿರುವ ಕಾರಣ ಇನ್ನಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ. ಇಂದು ಕೂಡ ಒಮ್ಮೆ ಚಿಕ್ಕ ಪ್ರಮಾಣದ ಭೂಕುಸಿತ ಉಂಟಾಗಿದೆ. ಆದರೆ, ಯಾರಿಗೂ ಗಾಯಗಳಾಗಿಲ್ಲ. ಇಲ್ಲಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.