Lata Mangeshkar : ಮೌನವಾಯ್ತು ಗಾನ ಕೋಗಿಲೆ..
ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಲೇ ಇಲ್ಲ. ಭಾರತದ ಗಾನ ಕೋಗಿಲೆ ಇಂದು ಹಾಡು ಇಲ್ಲಿಸಿದೆ. ಭಾರತೀಯ ಸಂಗೀತ ಜಗತ್ತಿಗೆ ಇಂದು ಕರಾಳ ದಿನ. lata-mangeshkar-nightingale of india saaksha tv
ಹೌದು..! ಭಾರತ ರತ್ನ, ಗಾನ ಕೋಗಿಲೆ, ಲತಾ ಮಂಗೇಶ್ಕರ್ ಅವರು ಇಂದು ನಮ್ಮ ನಿಮ್ಮೆಲ್ಲರನ್ನ ಅಗಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜನವರಿ 9ರಂದು ಕೋವಿಡ್ ದೃಢಪಟ್ಟ ಹಿನ್ನೆಲೆ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೋವಿಡ್ ಸೋಂಕು ಮತ್ತು ನ್ಯುಮೋನಿಯಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಕಾರಣ ಹಾಗೂ ಅವರ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಅವರಿಗೆ ಅಳವಡಿಸಿದ್ದ ವೆಂಟಿಲೇಟರ್ ನ್ನು ತೆಗೆಯಲಾಗಿತ್ತು.
ಆದರೆ ನಿನ್ನೆಯಿಂದ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತೆ ಗಂಭೀರವಾಗಿದ್ದು, ಪುನಃ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಿಗ್ಗೆ 8 ಗಂಟೆ 12 ನಿಮಿಷಗಳಿಗೆ ಲತಾ ಮಂಗೇಶ್ಕರ್ ಅವರು ಕೊನೆಯುಸಿರೆಳೆದಿದ್ದು, ಭಾರತೀಯ ಚಿತ್ರರಂಗ ಸೇರಿದಂತೆ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ.
ಅವರು 1942 ರಲ್ಲಿ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಭಾರತದ ನೈಟಿಂಗೇಲ್ ಎಂದು ಕರೆಯಲ್ಪಡುವ ಅವರು ಸುಮಾರು 20 ಭಾಷೆಗಳಲ್ಲಿ 50,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಲತಾ ಅವರ ಹಾಡುಗಳು ಇಂದಿಗೂ ಹಿಂದಿ ಚಿತ್ರರಂಗದಲ್ಲಿ ಕೇಳುಗರನ್ನು ರಂಜಿಸುತ್ತಲೇ ಇವೆ. ಅವರ ಗೈರುಹಾಜರಿಯ ಸುದ್ದಿಯಿಂದ ಸಿನಿ ಸಂಗೀತಾಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.
1942 ರಲ್ಲಿ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಲತಾ ಮಂಗೇಶ್ಕರ್, ನೌಷಾದ್ ಅವರಿಂದ ಹಿಡಿದು ಎಆರ್ ರೆಹಮಾನ್ ವರೆಗೂ ಎಲ್ಲರ ಹಾಡುಗಳಿಗೆ ಧ್ವನಿಯಾಗಿದ್ದಾರೆ. ನೈಟಿಂಗೆಲ್ ಆಫ್ ಇಂಡಿಯಾ ಎಂದು ಕರೆಸಿಕೊಳ್ಳುತ್ತಿದ್ದ ಲತಾ ಮಂಗೇಶ್ಕರ್ ಅವರು ಸುಮಾರು 20 ಭಾಷೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಹಾಡುಗಳನ್ನಾಡಿದ್ದಾರೆ. ಲತಾ ಅವರ ಹಾಡುಗಳು ಅಂದಿಗೂ ಇಂದಿಗೂ ಹಿಂದಿ ಚಿತ್ರರಂಗದಲ್ಲಿ ಕೇಳುಗರನ್ನು ರಂಜಿಸುತ್ತಲೇ ಇವೆ.
ಗಾನವೇ ಪರಮಾವಧಿ..
ಲತಾ ಅವರು ಸೆಪ್ಟೆಂಬರ್ 28, 1929 ರಂದು ಪ್ರಸಿದ್ಧ ಸಂಗೀತಗಾರ ದೀನಾನಾಥ್ ಮಂಗೇಶ್ಕರ್ ಅವರ ಹಿರಿಯ ಮಗಳಾಗಿ ಜನಿಸಿದರು. ಐದನೇ ವಯಸ್ಸಿನಲ್ಲಿ ತಂದೆಯೊಂದಿಗೆ ಸಂಗೀತ ತರಬೇತಿಯನ್ನು ಪ್ರಾರಂಭಿಸಿದ ಲತಾ ಅವರು, ಸಂಗೀತವೇ ತಮ್ಮ ಜಗತ್ತಿನಂತೆ ಜೀವಿಸಿದ್ದರು. ಚಿಕ್ಕವಯಸ್ಸಿನಲ್ಲಿಯೇ ತಂದೆ ತೀರಿಕೊಂಡಿದ್ದರಿಂದ ಹದಿಮೂರನೇ ವಯಸ್ಸಿನಲ್ಲಿ ಸಂಸಾರವನ್ನು ಪೋಷಿಸುವ ಜವಾಬ್ದಾರಿ ಲತಾ ಅವರ ಮೇಲೆ ಬಿತ್ತು. ಇದರಿಂದ ಚಿತ್ರರಂಗಕ್ಕೆ ಪ್ರವೇಶಿಸಿದ ಲತಾ ಮಂಗೇಶ್ಕರ್, 1942 ರಲ್ಲಿ ಮರಾಠಿ ಚಿತ್ರ ಪಹ್ಲಾ ಮಂಗಳ ಗೌರ್ ನಲ್ಲಿ ಹೀರೋ ತಂಗಿಯಾಗಿ ನಟಿಸಿ, ಎರಡು ಹಾಡುಗಳನ್ನು ಹಾಡಿದರು. ಆ ನಂತರ ಅವರು ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ.
ಗಿನ್ನಿಸ್ ಬುಕ್
ಮಂಗೇಶ್ಕರ್ ಅವರು 1947 ರಲ್ಲಿ ಮಜ್ಬೂರ್ ಚಿತ್ರದ ಮೂಲಕ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಮಹಲ್ ಜೊತೆ ಸ್ಟಾರ್ ಪಟ್ಟ ಗಳಿಸಿದರು. ಅತ್ಯಂತ ಕಡಿಮೆ ಸಮಯದಲ್ಲಿಯೇ ತಮ್ಮ ಪ್ರತಿಭೆಯಿಂದ ಅತ್ಯುತ್ತನ ಶಿಖರಗಳನ್ನು ಏರಿದರು. ಅನೇಕ ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ ಲತಾ ಮಂಗೇಶ್ಕರ್, ಜನರ ಹೃದಯದಲ್ಲಿ ಲೆಜಂಡರಿ ಸಿಂಗರ್ ಆಗಿ ಅಳಿಸಲಾಗದ ಗುರುತು ಹಾಕಿದ್ದಾರೆ. ಲತಾ ಅವರು 1955 ರ ಮರಾಠಾ ಚಲನಚಿತ್ರ ರಾಮ್ ರಾಮ್ ಪವ್ಹಾನೆಗೆ ಸಂಗೀತ ನಿರ್ದೇಶನ ಮಾಡಿದ್ದರು. ಸಧಿ ಮನಸೇ ಚಿತ್ರಕ್ಕಾಗಿ ಮಹಾರಾಷ್ಟ್ರ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಯನ್ನು ಪಡೆದರು. ಈ ಚಿತ್ರದ ಐರೋನಿಂಚಿಯಾ ದೇವ ತುಲಾ ಹಾಡಿಗೆ ಲತಾ ಅತ್ಯುತ್ತಮ ಗಾಯಕಿ ಪ್ರಶಸ್ತಿಯನ್ನೂ ಪಡೆದರು. 1948-1978ರ ಅವಧಿಯಲ್ಲಿ 30,000 ಹಾಡುಗಳನ್ನು ಹಾಡಿದ ಏಕೈಕ ಗಾಯಕಿಯಾಗಿ ಲತಾ ಮಂಗೇಶ್ಕರ್ ಅವರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ.
ಭಾರತದ ನೈಟಿಂಗೇಲ್ ಎಂಬ ಹೆಸರನ್ನ ದಕ್ಕಿಸಿಕೊಂಡ ಲತಾಜೀ ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಸೇವೆಗಾಗಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನದಿಂದ ಗೌರವಿಸಲ್ಪಟ್ಟಿದ್ದಾರೆ. ಜೊತೆಗೆ ಪದ್ಮಭೂಷಣ, ಪದ್ಮವಿಭೂಷಣ, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು ಇತರ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. ಎಂಎಸ್ ಸುಬ್ಬುಲಕ್ಷ್ಮಿ ನಂತರ ಭಾರತ ಸರ್ಕಾರದಿಂದ ಅನೇಕ ಅತ್ಯುತ್ತಮ ಪ್ರಶಸ್ತಿಗಳನ್ನು ಪಡೆದ ಅಪರೂಪದ ಗಾಯಕರಲ್ಲಿ ಲತಾಜೀ ಒಬ್ಬರು.












