ಗಾಯನ ಲೋಕದ ಸಾಮ್ರಾಜ್ಞಿ ನಿಧನಕ್ಕೆ ಸಿದ್ದರಾಮಯ್ಯ ಕಂಬನಿ
ಬೆಂಗಳೂರು : ಭಾರತ ರತ್ನ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮಧುರ ಕಂಠದ ಮೂಲಕ ದಶಕಗಳಿಂದ ಜನಮನವನ್ನು ರಂಜಿಸಿದ್ದ ಗಾನಕೋಗಿಲೆ ಲತಾ ಮಂಗೇಶ್ಕರ್ ಸಾವು ನನ್ನಂತಹ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಆಘಾತಕ್ಕೀಡು ಮಾಡಿದೆ.
ನಮ್ಮನ್ನು ಅಗಲಿ ಹೋದರೂ ಅಮ ಕಂಠ ಸಿರಿಯ ಮೂಲಕ ನಮ್ಮೊಳಗೆ ಲತಾ ದೀದಿ ಅಜರಾಮರ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವೆ ಎಂದು ಬರೆದುಕೊಂಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಜನವರಿ 9ರಂದು ಕೋವಿಡ್ ದೃಢಪಟ್ಟ ಹಿನ್ನೆಲೆ ಲತಾ ಮಂಗೇಶ್ಕರ್ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಕೋವಿಡ್ ಸೋಂಕು ಮತ್ತು ನ್ಯುಮೋನಿಯಾದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಕಾರಣ ಹಾಗೂ ಅವರ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಕಳೆದ ವಾರ ಅವರಿಗೆ ಅಳವಡಿಸಿದ್ದ ವೆಂಟಿಲೇಟರ್ ನ್ನು ತೆಗೆಯಲಾಗಿತ್ತು.
ಆದರೆ ನಿನ್ನೆಯಿಂದ ಲತಾ ಮಂಗೇಶ್ಕರ್ ಅವರ ಆರೋಗ್ಯ ಸ್ಥಿತಿ ಮತ್ತೆ ಗಂಭೀರವಾಗಿದ್ದು, ಪುನಃ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಇಂದು ಬೆಳಿಗ್ಗೆ 8 ಗಂಟೆ 12 ನಿಮಿಷಗಳಿಗೆ ಲತಾ ಮಂಗೇಶ್ಕರ್ ಅವರು ಕೊನೆಯುಸಿರೆಳೆದಿದ್ದು, ಭಾರತೀಯ ಚಿತ್ರರಂಗ ಸೇರಿದಂತೆ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ.