Latha Mangeshkar : ಸಿನಿಮಾರಂಗದಲ್ಲಿ ಲತಾ ಮಂಗೇಶ್ಕರ್ ಜರ್ನಿ..
ನವದೆಹಲಿ : ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆ ಕೊನೆಗೂ ಫಲಿಸಲೇ ಇಲ್ಲ.. ಇಂದು ಭಾರತೀಯರ ಪಾಲಿಗೆ ಕರಾಳ ದಿನ..
ಭಾರತೀಯ ಸಿನಿಮಾರಂಗದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ವಿಧಿವಶರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಜನವರಿ 9 ರಂದು ಅವರಿಗೆ ಕೋವಿಡ್-19 ಪಾಸಿಟಿವ್ ಬಂದ ನಂತರ ಆಸ್ಪತ್ರೆಗೆ ದಾಖಲಾಗಿದ್ದರು,..
ಮೊದಲ ದಿನದಿಂದಲೇ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತಿತ್ತು.. ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳಿಗೆ ಭಾಜನರಾದ ಭಾರತದ ನೈಟಿಂಗಲ್ ಲತಾ ಮಂಗೇಶ್ಕರ್ ಅವರು ಸುಮಾರು 30 ಕ್ಕೂ ಅಧಿಕ ಭಾಷೆಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ..
ಹಿಂದಿ ಹೊರತಾಗಿ ಕನ್ನಡ , ಮರಾಠಿ ಬಂಗಾಳಿ ಸೇರಿದಂತೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ. ಸಂಗೀತ ಕುಟುಂಬಕ್ಕೆ ಸೇರಿದವರಾದ ಮಂಗೇಶ್ಕರ್ ಅವರು ಸಂಗೀತ ಸಂಯೋಜನೆಯ ಜೊತೆಗೆ ಬೆರಳೆಣಿಕೆಯಷ್ಟು ಸಿನಿಮಾಗಳನ್ನೂ ನಿರ್ಮಿಸಿದ್ದಾರೆ.
1929 ರಲ್ಲಿ ಲತಾ ಮಂಗೇಶ್ಕರ್ ಅವರು ಜನಿಸಿದರು. ಅವರ ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ ಶಾಸ್ತ್ರೀಯ ಸಂಗೀತಗಾರರಾಗಿದ್ದರು. ಲತಾ ಮಂಗೇಶ್ಕರ್ ಅವರಿಗೆ ಬಾಲ್ಯದಲ್ಲಿ ಸಂಗೀತ ಪಾಠ ಮಾಡಿದ್ದರು.
1942 ರಲ್ಲಿ, ಅವರ ತಂದೆ ನಿಧನರಾದಾಗ, ಲತಾ ಮಂಗೇಶ್ಕರ್ ಅವರಿಗಿನ್ನೂ 13 ವರ್ಷವಾಗಿತ್ತು. 1945 ರಲ್ಲಿ, ಮಧುಬಾಲಾ ನಟಿಸಿದ ಮಹಲ್ ಚಿತ್ರದ ಆಯೇಗಾ ಆನೇವಾಲಾ ಹಾಡಿನಲ್ಲಿ ಮಂಗೇಶ್ಕರ್ ಅವರು ಆರಂಭಿಕ ಹಿಟ್ ಕೊಟ್ಟರು.
ಅಲ್ಲಿಂದ ಲತಾ ಮಂಗೇಶ್ಕರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಹಿಂದುವರಿಗಿ ನೋಡಿಯೇ ಇಲ್ಲ.. ಮಧುಮತಿಯಲ್ಲಿನ ಸಲೀಲ್ ಚೌಧರಿಯವರ ಹಾಡುಗಳಿಗೆ ಲತಾ ಅವರು ಧ್ವನಿಯಾಗಿದ್ದರು. ಈ ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು. ಬೀಸ್ ಸಾಲ್ ಬಾದ್, ಖಂಡನ್ ಮತ್ತು ಜೀನೆ ಕಿ ರಾಹ್ ನಲ್ಲಿ ಹಾಡಿದ ಹಾಡುಗಳಿಗೂ ಇನ್ನೂ ಮೂರು ಫಿಲ್ಮ್ಫೇರ್ ಪ್ರಶಸ್ತಿಗಳನ್ನ ತಮ್ಮದಾಗಿಸಿಕೊಂಡರು.
ಪರಿಚಯ, ಕೋರಾ ಕಾಗಜ್ ಮತ್ತು ಲೇಕಿನ್ ಚಿತ್ರಗಳಿಗಾಗಿ ಲತಾ ಮಂಗೇಶ್ಕರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಪಾಕೀಜಾ, ಅಭಿಮಾನ್, ಅಮರ್ ಪ್ರೇಮ್, ಆಂಧಿ, ಸಿಲ್ಸಿಲಾ, ಚಾಂದಿನಿ, ಸಾಗರ್, ರುಡಾಲಿ ಮತ್ತು ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ ಸಿನಿಮಾಗಳಲ್ಲೂ ಅವರ ಅವಿಸ್ಮರಣೀಯ ಕೊಡುಗೆ ಇದೆ.