ಹೊಸದಿಲ್ಲಿ, ಮೇ 17 : ಭಾರತ ಮೂಲದ ಬಹು ರಾಷ್ಟ್ರೀಯ ಕಂಪನಿಯಾದ ಲಾವಾ, ತನ್ನಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸಲು ಮುಂದಾಗಿದೆ. ಇತ್ತೀಚೆಗೆ ಪ್ರಧಾನಿ ಮೋದಿ ಸ್ವದೇಶಿ ಉತ್ಪನ್ನಗಳಿಗೆ ಧ್ವನಿಯಾಗಿ ಎಂದು ಕರೆಕೊಟ್ಟ ಬೆನ್ನಲ್ಲೇ ಲಾವಾ ಕಂಪೆನಿ ಈ ಮಹತ್ವದ ನಿರ್ಧಾರ ವನ್ನು ಕೈಗೊಂಡಿದೆ. ಚೀನಾದಿಂದ ಭಾರತಕ್ಕೆ ರಫ್ತು ಮಾಡಲು ಉದ್ದೇಶಿಸಿರುವ ತನ್ನ ಎಲ್ಲಾ ಫೋನ್‌ಗಳ ಉತ್ಪಾದನಾ ಮೂಲವನ್ನು ಬದಲಾಯಿಸುವುದಾಗಿ ಭಾರತೀಯ ಸ್ಮಾರ್ಟ್‌ಫೋನ್ ತಯಾರಕ ಲಾವಾ ಹೇಳಿದ್ದಾರೆ. ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಗಳಲ್ಲಿನ ವರದಿಯ ಪ್ರಕಾರ ಕಂಪನಿಯು ತನ್ನ ಉತ್ಪಾದನಾ ಕೇಂದ್ರವನ್ನೇ ಭಾರತಕ್ಕೆ ಸ್ಥಳಾಂತರಿಸಲಿದೆ.
ನಮ್ಮ ಸಂಪೂರ್ಣ ಮೊಬೈಲ್ ಆರ್ & ಡಿ, ವಿನ್ಯಾಸ ಮತ್ತು ಉತ್ಪಾದನೆಯನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸುವ ಅವಕಾಶವನ್ನು ನಾವು ಕುತೂಹಲದಿಂದ ಎದುರು ನೋಡುತ್ತಿದ್ದೇವೆ. ಉತ್ಪಾದನಾ ಸಂಬಂಧಿತ ಪ್ರೋತ್ಸಾಹದೊಂದಿಗೆ, ವಿಶ್ವ ಮಾರುಕಟ್ಟೆಯಲ್ಲಿ ನಮ್ಮ ಉತ್ಪಾದನೆಯನ್ನು ಹೆಚ್ಚಿಸಲು ಬಯಸಿದ್ದೇವೆ. ಆದ್ದರಿಂದ ನಾವು ಈ ಬದಲಾವಣೆಯನ್ನು ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಲಾವಾ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹರಿ ಓಂ ರೈ ಹೇಳಿದ್ದಾರೆ. ಭಾರತದ ತಮಿಳುನಾಡು, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನದಲ್ಲಿ ಉತ್ತಮ ಮಾರುಕಟ್ಟೆ ಹೊಂದಿರುವ ಲಾವಾ ಕಂಪೆನಿ ಪ್ರತಿವರ್ಷ ಶೇ 33 ರಷ್ಟು ಫೋನ್ ಉತ್ಪನ್ನಗಳನ್ನು ಮೆಕ್ಸಿಕೊ, ಆಫ್ರಿಕಾ, ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ರಪ್ತು ಮಾಡುತ್ತದೆ.








