ಲಕ್ನೋ: ಕಾನೂನು ಪದವಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಹಾಸ್ಟೇಲ್ ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ.
ಲಕ್ನೋದ ಆಶಿಯಾನಾ ಪ್ರದೇಶದಲ್ಲಿರುವ ರಾಮ್ ಮನೋಹರ್ ಲೋಹಿಯಾ ಕಾನೂನು ವಿವಿ (Ram Manohar Lohia National Law University) ಹಾಸ್ಟೆಲ್ ನಲ್ಲಿ ಕಾನೂನು ವಿದ್ಯಾರ್ಥಿನಿ ಅನಿಕಾ ರಸ್ತೋಗಿ ಶವವಾಗಿ ಪತ್ತೆಯಾಗಿದ್ದಾರೆ. ಅನಿಕಾ ಅವರು 3ನೇ ವರ್ಷದ ಎಲ್ ಎಲ್ ಬಿ ಓದುತ್ತಿದ್ದರು. ಅನಿಕಾ ಸದ್ಯ ದೆಹಲಿ NIA (ರಾಷ್ಟ್ರೀಯ ತನಿಖಾ ಸಂಸ್ಥೆ) ಇನ್ಸ್ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿರುವ ಸಂತೋಷ್ ರಸ್ತೋಗಿ ಅವರ ಪುತ್ರಿ ಎನ್ನಲಾಗಿದೆ.
ಅನಿಕಾ (Anika Rastogi) ಶನಿವಾರ ತಡರಾತ್ರಿ ಹಾಸ್ಟೆಲ್ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿಕಾ ಅವರ ಬಟ್ಟೆ ಯಥಾಸ್ಥಿತಿಯಲ್ಲಿತ್ತು, ಆಕೆ ದೇಹದಲ್ಲೂ ಯಾವುದೇ ಗಾಯಗಳು ಕಂಡುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ನಂತರ ಸತ್ಯ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.








