ಮೈಸೂರು : ಡ್ರಗ್ ಮಾಫಿಯಾ ಸುದ್ದಿಗಳ ಆರ್ಭಟದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪ ಸದ್ದು ಮಾಡಲೇ ಇಲ್ಲ. ಸದ್ದಿಲ್ಲದೆ ಸೈಲೆಂಟ್ ಆಗಿರುವ ಈ ಸುದ್ದಿ ಈಗ ಮರುಜೀವ ಪಡೆದುಕೊಂಡಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ.
ಹೌದು..! ವಿಜಯೇಂದ್ರ ವಿರುದ್ಧ 5000 ಕೋಟಿ ಭ್ರಷ್ಟಾಚಾರದ ಆರೋಪ ಮಾಡಿರುವ ಎಂ.ಲಕ್ಷ್ಮಣ್, ದೆಹಲಿಯಲ್ಲಿ ಇದೇ ತಿಂಗಳ ಮೂರನೇ ವಾರ ದಾಖಲಾತಿಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಎಂ.ಲಕ್ಷ್ಮಣ್, ಸಿಎಂ ಪುತ್ರ ಬಿ ವೈ ವಿಜಯೇಂದ್ರ ಕಳೆದ 1 ವರ್ಷದಿಂದ ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಸೆ.3ನೇ ವಾರದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇವೆ. ಆದರೆ, ದಾಖಲೆ ಬಿಡುಗಡೆ ಮಾಡದಂತೆ ಕೋರ್ಟ್ ನಿಂದ ಸ್ಟೇ ತರುವ ಪ್ರಯತ್ನ ನಡೆಯುತ್ತಿದೆ. ಆದರೂ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ಈಗಾಗಲೇ ಕನ್ನಡದಲ್ಲಿರುವ ದಾಖಲೆಗಳನ್ನು ಇಂಗ್ಲಿಷ್‍ಗೆ ಭಾಷಾಂತರ ಮಾಡುವ ಕೆಲಸ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಅವ್ಯವಹಾರವನ್ನು ಬಹಿರಂಗ ಪಡಿಸುವ ಕೆಲಸ ಕೈಬಿಡುವುದಿಲ್ಲ. ಈ ವಿಚಾರದಲ್ಲಿ ಹೈಕಮಾಂಡ್ ನಿಂದ ಅನುಮತಿ ಸಹ ಪಡೆದಿದ್ದೇನೆ. ದೊಡ್ಡ ಮಟ್ಟದಲ್ಲಿ ದೆಹಲಿಯಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.








