ಕೊಲ್ಕತ್ತಾ ಟೆಸ್ಟ್ ಪಂದ್ಯದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟ ಲಕ್ಚ್ಮಣ್, ಆಸೀಸ್ ವಿರುದ್ಧ ರಾಹುಲ್ ಮತ್ತು ಲಕ್ಷ್ಮಣ್ ಪ್ಲಾನ್ ವರ್ಕ್ ಔಟ್ ಆಗಿದ್ದು ಹೇಗೆ ?
ನೆನಪಿದೆಯಾ 2001ರ ಕೊಲ್ಕತ್ತಾ ಟೆಸ್ಟ್ ಪಂದ್ಯ… ನೆನಪು ಇರಲೇಬೇಕು… ಯಾಕಂದ್ರೆ ಆ ಟೆಸ್ಟ್ ಪಂದ್ಯದ ಗೆಲುವು ಅಂತಿಂಥ ಗೆಲುವಲ್ಲ. ಐತಿಹಾಸಿಕ ಗೆಲುವು. ಅಷ್ಟೇ ಯಾಕೆ ಆಸ್ಟ್ರೇಲಿಯನ್ನರಿಗೆ ಗರ್ವಭಂಗ ಮಾಡಿದಂತಹ ಪಂದ್ಯ. ಗೆಲುವಿನ ಉನ್ಮಾದಲ್ಲಿದ್ದ ಆಸ್ಟ್ರೇಲಿಯಾ ಭಾರತಕ್ಕೆ ಫಾಲೋ ಆನ್ ಹೇರಿ ಸೋತು ಹೋದಂತಹ ಪಂದ್ಯವನ್ನು ಯಾರು ಕೂಡ ಮರೆಯೋಕೆ ಆಗಲ್ಲ.
ಅಂದ ಹಾಗೇ ಪಂದ್ಯದ ಗೆಲುವಿನ ರೂವಾರಿಗಳು ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್. ಅಪಾಯದಲ್ಲಿದ್ದ ತಂಡಕ್ಕೆ ಆಧಾರಸ್ತಂಭವಾಗಿ ನಿಂತು ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಿದ್ದ ರೀತಿಯನ್ನು ಮಾತ್ರ ಬಣ್ಣಿಸಲು ಸಾಧ್ಯವಿಲ್ಲ. ಆಸ್ಟ್ರೇಲಿಯನ್ನರ ವೇಗದ ಬೌಲಿಂಗ್ ಮತ್ತು ಸ್ಪಿನ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ್ದ ಆರ್‍ಎಲ್ ಫ್ರೆಂಡ್ಸ್ ಆಸ್ಟ್ರೇಲಿಯನ್ನರಿಗೆ ಮುಖಭಂಗವನ್ನುಂಟು ಮಾಡಿದ್ದರು.
ಇದೀಗ ಆ ಪಂದ್ಯದ ಬಗ್ಗೆ ವಿವಿಎಸ್ ಲಕ್ಷ್ಮಣ್ ನೆನಪು ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಾನು ಮತ್ತು ರಾಹುಲ್ ಯಾವ ರೀತಿ ಪ್ಲಾನ್ ಮಾಡಿಕೊಂಡು ಆಡಿದ್ದೇವೆ ಎಂಬುದನ್ನು ಹೇಳಿಕೊಂಡಿದ್ದಾರೆ. ಪಂದ್ಯದ ನಾಲ್ಕನೇ ದಿನ ಪೂರ್ತಿ ಬ್ಯಾಟಿಂಗ್ ಮಾಡಬೇಕು ಅಂತ ಮೊದಲೇ ನಿರ್ಧಾರ ಮಾಡಿಕೊಂಡಿದ್ದೇವು. ಆದ್ರೆ ಆ ದಿನ ರಾಹುಲ್ ವೈರಲ್ ಜ್ವರದಿಂದ ಬಳಲುತ್ತಿದ್ದರು. ನಾನು (ಲಕ್ಷ್ಮಣ್) ಬೆನ್ನು ನೋವಿನಿಂದ ಬಳಲುತ್ತಿದ್ದೆ. ಆದ್ರೂ ತಲೆಕೆಡಿಸಿಕೊಂಡಿರಲಿಲ್ಲ. ನಮ್ಮ ಗುರಿ ಇದ್ದದ್ದು ದಿನ ಪೂರ್ತಿ ಆಡಬೇಕು ಎಂಬುದು. ಅದಕ್ಕೆ ತಕ್ಕಂತೆ ಪ್ಲಾನ್ ಮಾಡಿಕೊಂಡೆವು. ಪ್ರತಿ ಓವರ್ ಆಡುವುದಕ್ಕೆ ಮುಂಚೆ ಬಾರೋ ಗೆಳೆಯ… ಇದೊಂದು ಓವರ್ ಆಡೋಣ ಅಂತ ಹೇಳಿಕೊಂಡು ಬ್ಯಾಟಿಂಗ್ ಮಾಡುತ್ತಿದ್ದೇವು. ಹೀಗೆ ಪ್ರತಿ ಓವರ್ ನಲ್ಲಿ ಹೇಳಿಕೊಂಡೇ ದಿನದ 90 ಓವರ್‍ಗಳನ್ನು ಆಡಿದ್ದೇವು. ನಮ್ಮ ಗುರಿಯನ್ನು ಸಾಧಿಸಿದ್ದೇವು.
ಅಂತಿಮವಾಗಿ ಭಾರತ 171 ರನ್‍ಗಳ ಭರ್ಜರಿ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 445 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ 171 ರನ್ ದಾಖಲಿಸಿತ್ತು. ಆದ್ರೆ ಆಸ್ಟ್ರೇಲಿಯಾ ಭಾರತವನ್ನು ಲಘುವಾಗಿ ಪರಿಗಣಿಸಿ ಫಾಲೋ ಆನ್ ಹೇರಿತ್ತು. ಸುಲಭವಾಗಿ ಗೆಲುವು ದಾಖಲಿಸುವ ಲೆಕ್ಕಚಾರದಲ್ಲಿದ್ದ ಸ್ಟೀವ್ ಲೆಕ್ಕಚಾರಗಳನ್ನು ದ್ರಾವಿಡ್ ಮತ್ತು ಲಕ್ಷ್ಮಣ್ ಬುಡಮೇಲು ಮಾಡಿದ್ದರು. ಲಕ್ಷ್ಮಣ್ 281 ರನ್ ದಾಖಲಿಸಿದ್ರೆ, ರಾಹುಲ್ 180 ರನ್ ಗಳಿಸಿದ್ದರು. ಅಲ್ಲದೆ ಆಸ್ಟ್ರೇಲಿಯಾಗೆ 384 ರನ್‍ಗಳ ಸವಾಲನ್ನು ನೀಡಿತ್ತು. ಅಂತಿಮ ದಿನ ಆಸ್ಟ್ರೇಲಿಯಾ 212 ರನ್‍ಗಳಿಗೆ ಸರ್ವಪತನಗೊಂಡು 171 ರನ್‍ಗಳ ರೋಚಕ ಜಯವನ್ನು ಸಾಧಿಸಿತ್ತು. ಅಂತಿಮ ದಿನದ ಪಂದ್ಯದಲ್ಲಿ ಹರ್ಭಜನ್ ಆರು ವಿಕೆಟ್ ಹಾಗೂ ಸಚಿನ್ ಮೂರು ವಿಕೆಟ್ ಪಡೆದಿದ್ದರು. ಅಂದ ಹಾಗೇ ಈ ಪಂದ್ಯದಲ್ಲಿ ಲಕ್ಷ್ಮಣ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.








