ಹಾಸನ: ಚಿರತೆಯೊಂದು ಕೋಳಿ ಶೆಡ್ ಗೆ ನುಗ್ಗಿ 40ಕ್ಕೂ ಅಧಿಕ ಕೋಳಿ ಬಲಿ ಪಡೆದ ಘಟನೆ ನಡೆದಿದ್ದು, ಸತತ ಮೂರು ಗಂಟೆಗಳ ಕಾರ್ಯಾಚರಣೆಯ ನಂತರ ಅದನ್ನು ಸೆರೆ ಹಿಡಿಯಲಾಗಿದೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಿ. ಸಾತೇನಹಳ್ಳಿ ಶಂಕರೇಗೌಡ ಎಂಬುವವರಿಗೆ ಸೇರಿದ್ದ ಕೋಳಿ ಫಾರಂನಲ್ಲಿಯೇ ಈ ಘಟನೆ ನಡೆದಿದೆ. ಕೋಳಿ ಫಾರಂ ಬಾಗಿಲಿಗೆ ಬೋನ್ ಇಟ್ಟು ಚಿರತೆ ಸೆರೆ ಹಿಡಿಯಲಾಗಿದೆ. ಚಿರತೆಯು ಹಾಡಹಗಲೇ ಕೋಳಿ ಫಾರಂಗೆ ನುಗ್ಗಿ 40ಕ್ಕೂ ಅಧಿಕ ಕೋಳಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಳಿ ಫಾರಂ ಮಾಲೀಕ ಶಂಕರೇಗೌಡ ಅವರು ಕೋಳಿಗೆ ಆಹಾರ ಹಾಕಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಅವರಿಗೂ ಚಿರತೆ ಕಾಣಿಸಿಕೊಂಡಿದೆ. ಆದರೆ, ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಹೀಗಾಗಿ ಸ್ಥಳೀಯರು ಚಿರತೆ ಹಿಡಿಯುವಂತೆ ಪಟ್ಟು ಹಿಡಿದಿದ್ದರು.