ಬೆಂಗಳೂರು : ರಾಜ್ಯದಲ್ಲಿ ಬರಗಾಲ ಸಮೀಪಿಸುತ್ತಿದೆ. ಈ ವೇಳೆ ಕುಡಿಯುವ ನೀರು ಸರಬರಾಜು ಮಾಡಬೇಕಾದ ಗ್ರಾಮೀಣಾಭಿವೃದ್ಧಿ ಸಚಿವರು ಎಲ್ಲಿ ಮಲಗಿದ್ದಾರೋ ಎಂಬ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಸಚಿವ ಕೆ.ಎಸ್ ಈಶ್ವರಪ್ಪ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ತಾವು ಕೊರೊನಾ ವಿಚಾರದಲ್ಲಿ ರಾಜಕೀಯ ಮಾಡಲ್ಲ ಎಂದು ಹೇಳಿ ಈಗ ರಾಜಕೀಯ ಮಾಡುತ್ತಿದ್ದಾರೆ. ಬೇಕಿದ್ದರೆ ಸ್ವತಃ ಅವರೇ ಬಂದು ನಾನು ಎಲ್ಲಿ ಮಲಗಿದ್ದೇನೆ ಎಂದು ನೋಡಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವೇಳೆ ಡಿ.ಕೆ ಶಿವಕುಮಾರ್ ಅವರ ಸುದ್ದಿಗೋಷ್ಠಿ ಬಗ್ಗೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಇಂದು ಡಿ.ಕೆ ಶಿವಕುಮಾರ್ ಅವರು ಸುದ್ದಿಗೋಷ್ಠಿ ಕರೆಯುತ್ತಾರೆಂಬ ಕಲ್ಪನೆ ಸಹ ನನಗೆ ಇರಲಿಲ್ಲ. ವಿರೋಧ ಪಕ್ಷದ ನಾಯಕರಾಗಿ ಡಿಕೆಶಿ ನನಗೆ ಕರೆ ಮಾಡಿ ಕೇಳಬಹುದಿತ್ತು. ಆದರೆ, ಅದನ್ನು ಬಿಟ್ಟು ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಗುಡುಗಿದ್ರು. ಇನ್ನು ಡಿ.ಕೆ.ಶಿವಕುಮಾರ್ ಪ್ರಸ್ತಾಪ ಮಾಡಿರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ನಾನೇನು ಸುಮ್ಮನೆ ಕೂತಿಲ್ಲ, ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ನಮ್ಮ ಕೆಲಸ ಮತ್ತು ಕರ್ತವ್ಯವನ್ನು ನಾವು ಮಾಡ್ತಿದ್ದೇವೆ. ನಾನು ಎಲ್ಲಾದ್ರೂ ಮಲಗಿ ಬಂದಿದ್ರೆ ಇಲ್ಯಾಕೆ ಬಂದು ಸುದ್ದಿಗೋಷ್ಠಿ ಮಾಡ್ತಿದ್ದೆ ಎಂದು ಪ್ರಶ್ನಿಸಿದ ಈಶ್ವರಪ್ಪ, ಬೇಕಿದ್ದರೆ ನಾನು ಎಲ್ಲಿ ಮಲಗಿದ್ದೇನೆ ಎಂದು ಸ್ವತಃ ಅವರೇ ಬಂದು ನೋಡಲಿ’ ಎಂದು ಕುಟುಕಿದರು.