ಕ್ಯಾಪ್ಟನ್ ದೀಪಕ್ ವಸಂತ್ ಸಾಠೆಯವರ ತ್ಯಾಗ ಬಲಿದಾನ ನಮ್ಮ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿ !

ಕ್ಯಾಪ್ಟನ್ ದೀಪಕ್ ವಸಂತ್ ಸಾಠೆಯವರ ತ್ಯಾಗ ಬಲಿದಾನ ನಮ್ಮ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿ!

“ನಾನೊಂದು ವೇಳೆ ರಣಭೂಮಿಯಲ್ಲಿ ಸತ್ತರೇ,
ಶವಪೆಟ್ಟಿಗೆಯಲ್ಲಿ ಮಲಗಿದ ನನ್ನ ಪಾರ್ಥಿವ ಶರೀರವನ್ನು ಮನೆಗೆ ಕಳಿಸಿ,
ನನ್ನೆದೆಯ ಮೇಲೆ ನನ್ನ ಪದಕಗಳನ್ನಿಡಿ
ನನ್ನ ತಾಯಿಗೆ ತಿಳಿಸಿ, ನನ್ನ ಕೆಲಸವನ್ನು ನಾನು ಸಮರ್ಥವಾಗಿ ಮುಗಿಸಿದ್ದೇನೆ
ನನ್ನ ತಂದೆಗೆ ತಿಳಿಸಿ ಕುಗ್ಗಬೇಡಿರೆಂದು
ಇನ್ನು ಮುಂದೆ ಅವರಿಗೆ ನನ್ನಿಂದ ಚಿಂತೆ ಒತ್ತಡಗಳಿರುವುದಿಲ್ಲ
ನನ್ನ ಸಹೋದರರಿಗೆ ತಿಳಿಸಿ, ಉತ್ತಮವಾಗಿ ವಿದ್ಯಾಭ್ಯಾಸ ನಡೆಸಿರೆಂದು
ನನ್ನ ದ್ವಿಚಕ್ರವಾಹನದ ಚಾವಿ ಇನ್ನು ಮುಂದೆ ಅವರದ್ದೇ ಸ್ವಂತ
ನನ್ನ ತಂಗಿಗೆ ದುಃಖಿಸಬೇಡವೆಂದು ಹೇಳಿ
ಈ ಸೂರ್ಯಾಸ್ತದ ನಂತರ ಅವಳ ಸಹೋದರ ಮತ್ತೆಂದೂ ಉದಯಿಸಲಾರ
ನನ್ನ ಪ್ರೀತಿಯ ಸಂಗಾತಿಗೆ ಅಳಬೇಡವೆಂದು ಹೇಳಿ
ಏಕೆಂದರೆ ನಾನೊಬ್ಬ ಸೈನಿಕ;
ಹುಟ್ಟಿದ್ದೇ ಸಾಯಲು”

ಇನ್ನೇನು ತಮ್ಮ ಸಾವು ಹತ್ತಿರದಲ್ಲಿದೆ, ತಮ್ಮನ್ನಪ್ಪಲಿದೆ ಎಂದು ಅರಿವಾಗುತ್ತಿದ್ದ ಸಮಯದಲ್ಲೂ ವಿಂಗ್ ಕಮ್ಯಾಂಡರ್ ಕ್ಯಾಪ್ಟನ್ ದೀಪಕ್ ವಸಂತ್ ಸಾಠೆಯವರ ಮನಸಿನಲ್ಲಿ ಸುಳಿದಾಡಿದ್ದು ಒಂದೇ ಆಲೋಚನೆ. ತಾವು ಸತ್ತರೂ ಪರವಾಗಿಲ್ಲ, ಹೇಗಾದರೂ ಮಾಡಿ 180 ನಾಗರೀಕ ಪ್ರಯಾಣಿಕರ ಜೀವ ಉಳಿಸಲೇಬೇಕು. ಕೇರಳದ ಕೋಝಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದ ರನ್ ವೇನಿಂದ ‘ವಂದೇ ಭಾರತ್ ಮಿಷನ್’ ವಿಮಾನ ಜಾರಿದರೂ ಕ್ಯಾಪ್ಟನ್ ದೀಪಕ್ ಸಾಠೆ ಹಾಗೂ ಸಹ ಪೈಲೆಟ್ ಅಖಿಲೇಶ್ ಕುಮಾರ್ ತಮ್ಮ ಜೀವನದ ಕಟ್ಟ ಕಡೆಯ ಕರ್ತವ್ಯವನ್ನೂ ಸಮರ್ಪಕವಾಗಿ ನಿರ್ವಹಿಸಿ ಅಮರರಾದರು. ಇತಿಹಾಸ ಅವರನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎನ್ನುವ ಉದ್ದೇಶದಿಂದ ಈ ಸಣ್ಣ ಲೇಖನ, ಆ ವೀರ ಕರ್ತವ್ಯ ಪರಾಯಣ ಪೈಲೆಟ್ ಗಳಿಗೆ ಕಿರು ನುಡಿನಮನ.

ಭಾರತೀಯ ವಾಯುಸೇನೆಯ ಮಾಜಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದ ದೀಪಕ್ ಸಾಠೆ ಇಂಡಿಯನ್ ಏರ್ ಫೋರ್ಸ್ ಗೆ ಸೇರ್ಪಡೆಗೊಂಡಿದ್ದು 11 ಜೂನ್ 1981ರಲ್ಲಿ, ನಿವೃತ್ತಿಯಾಗಿದ್ದು 30 ಜೂನ್ 2003ರಂದು. ಮಿಗ್ 21 ಯುದ್ಧ ವಿಮಾನದ ಪೈಲೆಟ್ ಅಗಿ ಸುದೀರ್ಘ 22 ವರ್ಷಗಳ ಕಾಲ 17 ಸ್ಕ್ವಾರ್ಡ್ರನ್ ಗೋಲ್ಡನ್ ಆರೋವ್ಸ್ ನಲ್ಲಿ ಅಂಬಾಲದಲ್ಲಿ ಸೇವೆ ಸಲ್ಲಿಸಿದ್ದ ದೀಪಕ್ ಸಾಠೆ, ಮೊದಲು ಏರ್ ಬಸ್ 310ನ್ನು ನಂತರ ಏರ್ ಇಂಡಿಯಾ ಎಕ್ಸ್ ಪ್ರೆಸ್ ನ ಬೋಯಿಂಗ್ 737 ಅನ್ನು ಚಲಾಯಿಸಿದ ಅನುಭವ ಹೊಂದಿದ್ದವರು. ಕಡೆಯ 17 ವರ್ಷಗಳಿಂದ ಅವರು ಬೋಯಿಂಗ್ 737 ಉಡಾವಣೆಯಲ್ಲಿ ನಿರತರಾಗಿದ್ದರು. ಕ್ಯಾಪ್ಟನ್ ಸಾಠೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ 58ನೇ ಬ್ಯಾಚ್ ನ ರಾಷ್ಟ್ರಪತಿ ಚಿನ್ನದ ಪದಕ ಪುರಸ್ಕೃತರಾಗಿದ್ದವರು. ದುಂಡಿಗಲ್ ನಲ್ಲಿ ನಡೆದಿದ್ದ ಇಂಡಿಯನ್ ಏರ್ ಫೋರ್ಸ್ ಅಕಾಡೆಮಿಯ 127ನೇ ಪೆರೆಡ್ ನಲ್ಲಿ ಈ ಚಿನ್ನದ ಪದಕದ ಗೌರವಕ್ಕೆ ಭಾಜನರಾಗಿದ್ದರು. ಮೂಲತಃ ಮುಂಬೈನ ಪೋವೈ ನಿವಾಸಿಯಾಗಿದ್ದ ಜಲವಾಯು ವಿಹಾರ್ ನಲ್ಲೀಗ ಅವರ ಸಾಧನೆಗಳ ಮೆಲುಕು ನಡೆಯುತ್ತಿರಬಹುದು.

ವಿಂಗ್ ಕಮ್ಯಾಂಡರ್ ದೀಪಕ್ ವಸಂತ್ ಸಾಠೆ ಸೋವಿಯತ್ ಮೂಲದ ಮಿಗ್ 21 ಯುದ್ಧ ವಿಮಾನಗಳ ಉಡಾವಣೆ ಬಲ್ಲ ಚತುರ ಪೈಲೆಟ್ ಮಾತ್ರವಾಗಿರಲಿಲ್ಲ. ಅವರು ಏರ್ ಫೋರ್ಸ್ ನ ಪ್ರಮುಖ ನುರಿತ ಪೈಲೆಟ್ ಗಳಲ್ಲಿ ಒಬ್ಬರಾಗಿ 22 ವರ್ಷ ಸೇವೆ ಸಲ್ಲಿಸಿದ್ದವರು. ಅಪಾರ ಹಾರಾಟದ ಅನುಭವ ಹೊಂದಿದ್ದ ಕ್ಯಾಪ್ಟನ್ ಸಾಠೆ ಹೆಚ್ ಎ ಎಲ್ ನ ಪರೀಕ್ಷಾರ್ಥ ಉಡಾವಣೆಯ ಪೈಲೆಟ್ ಆಗಿಯೂ ಸೇವೆ ಸಲ್ಲಿಸಿದ್ದರು.

ಏರ್ ಕ್ರಾಫ್ಟ್ ಎಂಡ್ ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟಾಬ್ಲಿಷ್ ಮೆಂಟ್ ಕಾರ್ಯಾಚರಣೆಗಳಲ್ಲಿ ವಿಂಗ್ ಕಮ್ಯಾಂಡರ್ ದೀಪಕ್ ಸಾಠೆಯವರ ಜೊತೆ ಕೆಲಸ ಮಾಡಿದ್ದ ಸೆಂಟ್ರಲ್ ಫಾರ್ ಏರ್ ಪವರ್ ಸ್ಟಡೀಸ್ ನ ಎಡಿಜಿ ಆಗಿದ್ದ ಏರ್ ವೈಸ್ ಮಾರ್ಷಲ್ ಮನಮೋಹನ್ ಬಹದ್ದೂರ್, ತಮ್ಮ ಸೇವೆಯ ದಿನಗಳನ್ನು ನೆನಪು ಮಾಡಿಕೊಂಡು ದೀಪಕ ಸಾಠೆಯವರಿಗೆ ಅಶ್ರುತರ್ಪಣ ಸಲ್ಲಿಸಿದ್ದಾರೆ.

ಕೇರಳದ ಕೋಝಿಕೋಡ್ ನ ಕರಿಪುರ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ವಂದೇ ಭಾರತ್ ಮಿಷನ್ ನ ಐಎಕ್ಸ್ -1344 ನಾಗರೀಕ ವಿಮಾನದ ಒಟ್ಟು 191 ಮಂದಿಯಲ್ಲಿ 10 ಶಿಶುಗಳು ಸೇರಿ 184 ನಾಗರೀಕ ಪ್ರಯಾಣಿಕರಿದ್ದರು. ದುಬೈನಿಂದ ಕರೋನಾ ಸೋಂಕಿತರನ್ನು ಹೊತ್ತು ಬರುತ್ತಿದ್ದ ಈ ವಿಮಾನವನ್ನು ಕ್ಯಾಪ್ಟನ್ ಸಾಠೆ ಹಾಗೂ ಅಖಿಲೇಶ್ ಕುಮಾರ್ ನಡೆಸುತ್ತಿದ್ದರು. ಹವಾಮಾನ ವೈಪರೀತ್ಯದಿಂದ ವಿಮಾನ ಇಳಿಸಲಾಗುತ್ತಿಲ್ಲ ಎಂದಾಗ ಗಗನದಲ್ಲೇ ಹತ್ತಾರು ಸುತ್ತು ಹಾಕಿದ ದೀಪಕ್ ಸಾಠೆ ಇಂಧನ ಖರ್ಚು ಮಾಡಿ ಕೊನೆಗೆ ಲ್ಯಾಂಡಿಂಗ್ ಪ್ರಯತ್ನಕ್ಕೆ ಮುಂದಾದರು. ಅಂತಿಮ ಕ್ಷಣದವರೆಗೂ ಸುರಕ್ಷಿತವಾಗಿ ಇಳಿಸಲು ಪ್ರಯತ್ನಿಸಿದ ಕ್ಯಾಪ್ಟನ್ ಸಾಠೆಯವರ ಸಮಯಪ್ರಜ್ಞೆಯಿಂದ ವಿಮಾನದಲ್ಲಿದ್ದ ಅಷ್ಟೂ ಪ್ರಯಾಣಿಕರು ಸುಟ್ಟು ಬೂದಿಯಾಗುವುದು ತಪ್ಪಿತು. ಜೀವಹಾನಿಗಳು ಕಮ್ಮಿಯಾದವು. ತಮ್ಮ ಪ್ರಾಣವನ್ನು ಪಣವಿಟ್ಟು ನಾಗರೀಕರನ್ನು ಕಾಪಾಡಿದ ದೀಪಕ್ ಸಾಠೆ ನಿಜಕ್ಕೂ ಒಬ್ಬ ಸಮರ್ಥ ಯೋಧ. ಕರಿಪುರದ ರನ್ ವೇ 10 ರಿಂದ ಮುಂದೆ ದಾಟಿದ ವಿಮಾನ 35 ಅಡಿಗಳ ಆಳದ ಕಣಿವೆಗೆ ಬೀಳುವ ತನಕ ತಮ್ಮಿಂದಾಗುವ ಎಲ್ಲಾ ಪ್ರಯತ್ನಗಳನ್ನು ದೀಪಕ್ ಮಾಡಿದ್ದರು.

ಕೋಝಿಕ್ಕೋಡ್ ವಿಮಾನ ನಿಲ್ದಾಣವೇನೂ ಅವರಿಗೆ ಹೊಸದಾಗಿರಲಿಲ್ಲ. ಈ ಹಿಂದೆ ಅವರು 27 ಸಲ ಇಲ್ಲಿ ಫ್ಲೈಟ್ ಲ್ಯಾಂಡಿಂಗ್ ಮಾಡಿದ್ದರು ಎಂದು ವರದಿಗಳು ಹೇಳುತ್ತವೆ. ಆದರೆ ತೀವ್ರವಾದ ಮಳೆಯಿಂದಾಗಿ ಅವರ ಪ್ರಯತ್ನಕ್ಕೆ ಯಶ ಸಿಗದೇ ಹೋಯಿತು. ಎರಡು ಬಾರಿ ಪ್ರಯತ್ನಿಸಿ ವಿಫಲರಾಗಿ ಮೂರನೆಯ ಪ್ರಯತ್ನದ ಲ್ಯಾಂಡಿಂಗ್ ವೇಳೆ ರನ್ ವೇನಿಂದ ಜಾರಿದ ವಿಮಾನ ಇಂತದ್ದೊಂದು ದುರ್ಘಟನೆಗೆ ಕಾರಣವಾಯಿತು.

ಯಾವಾಗ ತಮ್ಮ ಪ್ರಯತ್ನಗಳು ವಿಫಲವಾದವೋ ಕ್ಯಾಪ್ಟನ್ ಸಾಠೆ ಮತ್ತು ಇನ್ನೊಬ್ಬ ಚಾಲಕ ಅಧಿಕಾರಿ, ಸಹ ಪೈಲೆಟ್ ಅಖಿಲೇಶ್ ಕುಮಾರ್ ವಿಮಾನದ ಎಂಜಿನ್ ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದರು. ಇದು ತಮ್ಮ ಜೀವಕ್ಕೆ ಮಾರಕ ಎನ್ನುವ ಸಂಗತಿ ಅವರಿಗೆ ಖಂಡಿತಾ ಗೊತ್ತಿತ್ತು. ಆದರೆ ಅವರ ಮುಂದೆ ಉಳಿದ ಪ್ರಯಾಣಿಕರನ್ನು ಕಾಪಾಡುವ ಹೊಣೆಯಿದ್ದ ಕಾರಣ ಬೇರೆ ಆಯ್ಕೆಗಳೇ ಅವರಿಗಿರಲಿಲ್ಲ. ಸಾವನ್ನೇ ಆಯ್ಕೆ ಮಾಡಿಕೊಳ್ಳುವ ಮನಸ್ಥಿತಿ ಸಾಮಾನ್ಯದವರಿಂದ ಸಾಧ್ಯವಿಲ್ಲ. ಇಬ್ಬರೂ ಪೈಲೆಟ್ ಗಳ ಈ ತ್ಯಾಗಕ್ಕೆ ನಾವು ಮೌಲ್ಯ ನೀಡಲೇಬೇಕು.

ಈ ಹಿಂದೆ 1990ರಲ್ಲಿ ಘಟಿಸಿದ್ದ ವಿಮಾನ ಪತನದಲ್ಲಿ ದೀಪಕ್ ಸಾಠೆ ಗಂಭೀರವಾಗಿ ಗಾಯಗೊಂಡು 6 ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಅನಂತರ ಏರ್ ಪೋರ್ಸ್ ನ ಅಗತ್ಯ ಪರೀಕ್ಷೆಗಳಲ್ಲಿ ಪಾಸಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿ, ಮತ್ತೆ ಸೇವೆಗೆ ಹಾಜರಾಗಿದ್ದರು. ನಿವೃತ್ತ ಏರ್ ಕಮ್ಯಾಂಡರ್ ದೀಪಕ್ ಸಾಠೆ, ತಮ್ಮ ದಕ್ಷ ಕಾರ್ಯಕ್ಷಮತೆಯಿಂದ ಪ್ರಸಿದ್ಧರಾದವರು. ಅವರು ಸದಾ ಏನಾದರೂ ಮಾಡುತ್ತಲೇ ಇರಬೇಕು ಎನ್ನುವ ಕಾರ್ಯದಕ್ಷ ಅಧಿಕಾರಿಯಾಗಿದ್ದರು. ಅವರ ಇಬ್ಬರೂ ಮಕ್ಕಳು ಮುಂಬೈನ ಐಐಟಿ ಹಾಗೂ ಐಐಎಂಗಳ ಪದವೀಧರರು.

ದೀಪಕ್ ಸಾಠೆಯವರ ವೃದ್ಧ ತಂದೆ ಬ್ರಿಗೇಡಿಯರ್ ವಸಂತ್ ಸಾಠೆ ನಾಗಪುರದಲ್ಲಿ ತಮ್ಮ ಪತ್ನಿಯೊಂದಿಗೆ ವಾಸವಿದ್ದಾರೆ. ದೀಪಕ್ ಸಾಠೆಯವರ ಹಿರಿಯ ಸಹೋದರ ವಿಕಾಸ್ ಸಾಠೆ 1990ರಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರಮರಣ ಅಪ್ಪಿದ ಧೀರ ಸೈನಿಕ. ಒಂದರ್ಥದಲ್ಲಿ ಸಾಠೆಯವರದ್ದು ದೇಶಕ್ಕಾಗಿ ತಮ್ಮ ಜೀವನ ಮುಡುಪಿಟ್ಟ ವೀರಯೋಧರ ಕುಟುಂಬ.

ವಿಂಗ್ ಕಮ್ಯಾಂಡರ್ ದೀಪಕ್ ಸಾಠೆ ಸದಾ ಫಿಟ್ ಎಂಡ್ ಫೈನ್ ಅಧಿಕಾರಿ. ಅವರಿಗೆ ಚಾರಣದ ವಿಶೇಷ ಆಸಕ್ತಿಯಿತ್ತು. ದಕ್ಷಿಣ ಆಫ್ರಿಕಾದ ಹಲವು ಎತ್ತರದ ಪರ್ವತಗಳನ್ನು ಅವರು ಹತ್ತಿದ್ದರು. ಜೊತೆಗೆ ಅವರಿಗೆ ಸ್ಕ್ವಾಷ್ ಆಡುವ ಆಸಕ್ತಿಯಿತ್ತು. ತಮ್ಮ ಅತ್ಯಂತ ಶಿಸ್ತುಬದ್ಧ ದಿನಚರಿಯಲ್ಲಿ ವಿರಾಮದ ದಿನಗಳನ್ನು ಅವರು ಹೀಗೆ ಕಳೆಯುತ್ತಿದ್ದರು. ಹೀಗಿದ್ದ ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಇನ್ನು ನೆನಪು ಮಾತ್ರ. ನಾವು ಬಹಳ ಬೇಗ ಎಲ್ಲಾ ಮಹಾನುಭಾವರ ತ್ಯಾಗ ಬಲಿದಾನಗಳನ್ನು ಮರೆತುಬಿಡುತ್ತೇವೆ. ಹಾಗಾಗದಿರಲಿ ದೀಪಕ್ ಸಾಠೆ ನಮ್ಮ ಇತಿಹಾಸದಲ್ಲಿ ಚಿರಸ್ಥಾಯಿಯಾಗಿರಲಿ.

ವಿಭಾ (ವಿಶ್ವಾಸ್ ಭಾರದ್ವಾಜ್)

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This