ಬೆಂಗಳೂರು: ಕೊರೊನಾ ಹಾಗೂ ಕೊರೊನಾ ಸೋಂಕಿತರಲ್ಲದವರಿಗೆ ಬೆಡ್ ಇಲ್ಲದ ನೆಪ ಹೇಳಿ ಚಿಕಿತ್ಸೆ ನೀಡಲು ನಿರಾಕರಿಸಿದ ಬೆಂಗಳೂರಿನ 19 ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ಹಾಗೂ ನಾಲ್ಕು ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.
ನಗರದ ನೃಪತುಂಗ ರಸ್ತೆಯಲ್ಲಿರುವ ಸೈಂಟ್ ಮಾರ್ಥಾಸ್ ಆಸ್ಪತ್ರೆ, ರಂಗದೊರೆ ಆಸ್ಪತ್ರೆ, ಕ್ವೀನ್ಸ್ ರಸ್ತೆಯಲ್ಲಿರುವ ಶಿಫಾ ಆಸ್ಪತ್ರೆ, ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆ ಆಸ್ಪತ್ರೆ ವಿರುದ್ಧ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
ಇದೇ ವೇಳೆ, ಕಳೆದ ಒಂದು ವಾರದಿಂದ ಆಸ್ಪತ್ರೆಗಳಲ್ಲಿ ಬೆಡ್ ಇದ್ದರೂ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡದ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ 19 ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ಅನ್ನು ಬಿಬಿಎಂಪಿ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಕಂದಾಯ ಸಚಿವ ಆರ್.ಅಶೋಕ್ ಅವರ ಸೂಚನೆ ಮೇರೆ ಬಿಬಿಎಂಪಿ ಆರೋಗ್ಯಾಧಿಕಾರಿಗಳ ತಂಡ ಪರಿಶೀಲನೆ ನಡೆಸಿದ ವೇಳೆ ಶೇ.50ರಷ್ಟು ಹಾಸಿಗೆ ಮೀಸಲಿಡದೇ ಇರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಲೈಸೆನ್ಸ್ ರದ್ದು ಮಾಡಲಾಗಿದೆ. ಈ ಸಂಬಂಧ ಆಸ್ಪತ್ರೆಯ ಮುಂಭಾಗ ಪ್ರಕಟಣೆಯನ್ನು ಅಂಟಿಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ದಕ್ಷಿಣ ವಲಯ ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದ್ದಾರೆ.
ಲೈಸೆನ್ಸ್ ರದ್ದಾದ ಖಾಸಗಿ ಆಸ್ಪತ್ರೆಗಳ ಪಟ್ಟಿ
ಬಸವನಗುಡಿ-ಅನುಗ್ರಹ ವಿಠ್ಠಲ ಆಸ್ಪತ್ರೆ, ವಿನಾಯಕ ಆಸ್ಪತ್ರೆ, ಪ್ರಶಾಂತ್ ಆಸ್ಪತ್ರೆ, ರಾಧಾಕೃಷ್ಣ ಆಸ್ಪತ್ರೆ
ವಿಜಯನಗರ-ಗುರುಶ್ರೀ ಆಸ್ಪತ್ರೆ, ಕಾಲಭೈರವೇಶ್ವರ ಆಸ್ಪತ್ರೆ, ಪದ್ಮಶ್ರೀ ಆಸ್ಪತ್ರೆ, ಮಾರುತಿ ಆಸ್ಪತ್ರೆ
ಪದ್ಮನಾಭನಗರ-ಪ್ರೊಮೆಡ್ ಆಸ್ಪತ್ರೆ, ಎನ್.ಯು ಆಸ್ಪತ್ರೆ, ದೀಪಕ್ ಆಸ್ಪತ್ರೆ, ಸೇವಾಕ್ಷೇತ್ರ ಆಸ್ಪತ್ರೆ, ಉದ್ಭವ ಆಸ್ಪತ್ರೆ
ಬಿಟಿಎಂ ಲೇಔಟ್-ಗಂಗೋತ್ರಿ ಆಸ್ಪತ್ರೆ, ಅಕ್ಕೂರ ಆಸ್ಪತ್ರೆ, ಕಾರಂತ್ ಆಸ್ಪತ್ರೆ
ಚಿಕ್ಕಪೇಟೆ-ಹೆಚ್‍ಸಿಜಿ ಕ್ಯಾನ್ಸರ್ ಆಸ್ಪತ್ರೆ, ಟ್ರಿನಿಟಿ ಆಸ್ಪತ್ರೆ, ಮಯ್ಯಾ ಆಸ್ಪತ್ರೆ