ಮಡಿಕೇರಿ : 1984 ಅಮೃತಸರ ಆಪರೇಷನ್ ಬ್ಲೂ ಸ್ಟಾರ್ ನೇತೃತ್ವ ವಹಿಸಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೋದಂಡ ಎನ್.ಸೋಮಣ್ಣ ಅವರು ಅನಾರೋಗ್ಯದ ಹಿನ್ನೆಲೆ ತಮ್ಮ ಸ್ವಗ್ರಾಮ ಪಂಜರುಪೇಟೆಯಲ್ಲಿ ಶನಿವಾರ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಮೃತ ಸೋಮಣ್ಣ ಅವರು ಪತ್ನಿ ಸೇರಿದಂತೆ ಅಮೇರಿಕಾದಲ್ಲಿರುವ ಪುತ್ರ ಡಾ.ನಿವೇದ್ ಹಾಗೂ ಪುತ್ರಿ ಮುಕ್ಕಾಟಿರ ಶರನ್ ಅವರನ್ನು ಅಗಲಿದ್ದಾರೆ. ಸೋಮಣ್ಣ ಅವರು ಡೆಪ್ಯುಟಿ ಚೀಫ್ ಆಫ್ ಇಂಡಿಯನ್ ಆರ್ಮಿ ಆಗಿ ನಿವೃತ್ತರಾಗಿದ್ದರು. 
ಇಂದು ಮಧ್ಯಾಹ್ನ ಅವರ ಸ್ವಂತ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಬೇಕಿತ್ತು. ಆದರೆ, ಕೊರೊನಾ ಭೀತಿಯಿಂದ ಸಾಂಕೇತಿಕವಾಗಿ ಗೌರವ ಸಲ್ಲಿಕೆ ನಡೆಯಲಿದೆ ಎಂದು ನಿವೃತ್ತ ಸೇನಾಧಿಕಾರಿ ಮೇಜರ್ ನಂದಾ ನಂಜಪ್ಪ ಮಾಹಿತಿ ನೀಡಿದ್ದಾರೆ.
ಸೋಮಣ್ಣ ಅವರು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ, ಭೂಸೇನೆಯ ಸಹಾಯಕ ಉಪ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದರು. ಅಮೃತ್ಸರದಲ್ಲಿ ನಡೆದ ‘ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಯಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ನಿವೃತ್ತರಾದ ಮೇಲೆ ವಿರಾಜಪೇಟೆಯಲ್ಲಿ ನೆಲೆಸಿದ್ದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಮಹಾ ಪೋಷಕರಾಗಿಯೂ ಕೆಲಸ ಮಾಡುತ್ತಿದ್ದರು.







