ಕೊಪ್ಪಳ: ಜಿಲ್ಲೆಯಲ್ಲಿ ನಡೆದಿದ್ದ ಜಾತಿ ನಿಂದನೆ ಮತ್ತು ದೌರ್ಜನ್ಯ ಪ್ರಕರಣದಲ್ಲಿ (Atrocity Case) 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ದಂಡವನ್ನು ಕೊಪ್ಪಳ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ವಿಧಿಸಿ ಆದೇಶ ನೀಡಿದೆ.
ಇನ್ನುಳಿದ ಮೂವರು ಆರೋಪಿಗಳಿಗೆ 5 ವರ್ಷ ಜೈಲು ಹಾಗೂ ತಲಾ 2 ಸಾವಿರ ದಂಡ ವಿಧಿಸಲಾಗಿದೆ. ಜಿಲ್ಲಾ ನ್ಯಾಯಾಧೀಶ (Koppal District Majistret) ಸಿ. ಚಂದ್ರಶೇಖರ ಐತಿಹಾಸಿಕ ತೀರ್ಪು ಪ್ರಕಟಿಸಿದ್ದಾರೆ. ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಒಟ್ಟು 117 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪೈಕಿ ಹಲವರು ಸಾವನ್ನಪ್ಪಿದ್ದಾರೆ. ಕೆಲವರ ಹೆಸರು ರಿಪೀಟ್ ಆಗಿತ್ತು. ಉಳಿದ 101 ಆರೋಪಿಗಳು ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಮಾನಿಸಿತ್ತು. ಈ ಪೈಕಿ 3 ಅಪರಾಧಿಗಳು ಎಸ್ಸಿ/ಎಸ್ಟಿ ವರ್ಗದವರಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಅಟ್ರಾಸಿಟಿ ಕಾಯ್ದೆ ಅನ್ವಯವಿಲ್ಲ. ಹೀಗಾಗಿ ಅವರಿಗೆ 5 ವರ್ಷಗಳ ಶಿಕ್ಷೆ ಪ್ರಕಟಿಸಲಾಗಿದೆ.
ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಕಳೆದ 2014ರ ಆ.28 ರಂದು ಸವರ್ಣೀಯರು ಹಾಗೂ ದಲಿತರ ಮಧ್ಯೆ ಘರ್ಷಣೆ ನಡೆದಿತ್ತು. 10 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅ.21 ರಂದು ಆರೋಪ ಪಟ್ಟಿಯಲ್ಲಿನ ಎಲ್ಲ ಆರೋಪಿಗಳು ತಪ್ಪಿತಸ್ಥರು ಎಂದು ತೀರ್ಮಾನಿಸಿತ್ತು. ಆದರೆ, ಶಿಕ್ಷೆಯನ್ನು ಕಾಯ್ದಿರಿಸಿತ್ತು. ಆದರೆ, ಇಂದು ಸಂಜೆ ನ್ಯಾಯಾಧೀಶರು ಆದೇಶ ಪ್ರಕಟಿಸಿದ್ದಾರೆ.
ಗಂಗಾವತಿಯ ಚಿತ್ರಮಂದಿರದಲ್ಲಿ ಆರಂಭವಾದ ಗಲಾಟೆ ಮರಕುಂಬಿ ಗ್ರಾಮದಲ್ಲಿ ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಹಚ್ಚುವವರೆಗೆ ತಲುಪಿತ್ತು. ಹೀಗಾಗಿ ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟು ತನಿಖೆ ಆರಂಭಿಸಿದ್ದರು. ಆದರೆ, ಅದೇ ರಾತ್ರಿ ಆರೋಪಿಗಳು ದಲಿತರ ಕೇರಿಗೆ ನುಗ್ಗಿ ಗುಡಿಸಲಿಗೆ ಬೆಂಕಿ ಇಟ್ಟಿದ್ದರು ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ನ್ಯಾಯಾಧೀಶರು ಶಿಕ್ಷೆ ಪ್ರಕಟಿಸುತ್ತಿದ್ದಂತೆ ಕುಟುಂಬಸ್ಥರು, ಸಂಬಂಧಿಕರು ಗೋಳಾಡಿದ್ದಾರೆ. ಕೆಲವು ಮಹಿಳೆಯರು ಆದೇಶದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಹಲವರು ಘಟನೆ ನಡೆದ ದಿನ ಗ್ರಾಮದಲ್ಲಿ ಇರದ ವ್ಯಕ್ತಿಗಳಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.