ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ವಿಶ್ವವನ್ನು ವಿಲವಿಲ ಒದ್ದಾಡುವಂತೆ ಮಾಡಿದೆ. ಪ್ರಪಂಚದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೊನಾಸುರ ಕೇವಲ ಸೋಂಕಿತರನ್ನಷ್ಟೆ ಬಲಿ ಪಡೆದಿಲ್ಲ. ಲಕ್ಷಾಂತರ ಮಂದಿ ಬೀದಿಪಾಲಾಗುವಂತೆ ಮಾಡಿದೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬರೋಬ್ಬರಿ 4 ಲಕ್ಷ ಬೀಡಿ ಕಾರ್ಮಿಕರ ಬದುಕು ದುಸ್ತರವಾಗಿದೆ.
ಈ ಕಾರ್ಮಿಕರಿಗೆ ಲಾಕ್ ಡೌನ್ ಬಳಿಕ ಉದ್ಯೋಗ ಇಲ್ಲ
ಹೌದು..! ಬೀಡಿ ಕಾರ್ಮಿಕರೊಬ್ಬರು ದಿನಕ್ಕೆ ಸರಾಸರಿ 500 ಬೀಡಿ ಕಟ್ಟುತ್ತಾರೆ. ಒಂದು ಸಾವಿರ ಬೀಡಿ ಕಟ್ಟಿದರೆ 187 ರೂಪಾಯಿ ಸಿಗುತ್ತದೆ. ಅದರಂತೆ ಇವರ ದಿನದ ಆದಾಯ 90 ರೂಪಾಯಿ ಆಗುತ್ತದೆ. ನಿತ್ಯ ದುಡಿದು ಜೀವನ ಸಾಗಿಸುವ ಈ ಕಾರ್ಮಿಕರಿಗೆ ಲಾಕ್ ಡೌನ್ ಬಳಿಕ ಉದ್ಯೋಗ ಇಲ್ಲದಂತಾಗಿದೆ. 58 ವರ್ಷ ಮೀರಿದ ಕಾರ್ಮಿಕರಿಗೆ ಕೇವಲ 1 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ಇದು ಕೂಡ ಯಾವುದಕ್ಕೂ ಸಾಲುತ್ತಿಲ್ಲ. ಮನೆಯಲ್ಲಿ ಪುರುಷರು ಇತರೆ ಕೆಲಸಕ್ಕೆ ಹೋದರೆ ಮಹಿಳೆಯರು ಮನೆಯಲ್ಲಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಆದ್ರೆ ಇದೀಗ ಲಾಕ್ ಡೌನ್ ನಿಂದ ಪುರುಷರಿಗೆ ಉದ್ಯೋಗ ಇಲ್ಲ. ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಮಹಿಳೆಯರಿಗೂ ಉದ್ಯೋಗವಿಲ್ಲದಂತಾದ ಪರಿಣಾಮ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
ಸಾಮಾಜಿಕ ಅಂತರದ ಸಮಸ್ಯೆ ಇಲ್ಲ!
ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸದ್ಯಕ್ಕೆ ಇರುವ ಮಾರ್ಗವೆಂದರೇ ಅದುವೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಇದೇ ಕಾರಣಕ್ಕೆ ದೇಶದಲ್ಲಿ ಲಾಕ್ ಡೌನ್ ಘೋಷಣೆ ಮಾಡಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ. ಆದ್ರೆ ಬೀಡಿ ಕಾರ್ಮಿಕರ ಉದ್ಯೋಗದಿಂದ ಸಾಮಾಜಿಕ ಅಂತರದ ಸಮಸ್ಯೆ ಉಂಟಾಗುವುದಿಲ್ಲ. ಬೀಡಿ ಕಾರ್ಮಿಕರು ತಮ್ಮ ಮನೆಯಲ್ಲಿ ಬೀಡಿ ಕಟ್ಟಿ ಒಮ್ಮೆ ತಮ್ಮ ಮನೆಯ ಸಮೀಪದ ಬೀಡಿ ಗುತ್ತಿಗೆದಾರರಿಗೆ ಅದನ್ನು ತಲುಪಿಸುತ್ತಾರೆ. ಬೀಡಿ ಉದ್ದಿಮೆಯಿಂದ ಯಾವುದೇ ಸಾಮಾಜಿಕ ಅಂತರದ ತೊಂದರೆಯೂ ಆಗುವುದಿಲ್ಲ. ಈ ಕಾರಣಕ್ಕಾಗಿ ಕೇರಳ ಸರ್ಕಾರ ಅಲ್ಲಿನ ಬೀಡಿ ಕಾರ್ಮಿಕರ ಸಂಕಷ್ಟ ಅರಿತು ಎರಡು ದಿನ ಬೀಡಿ ಕಾರ್ಮಿಕರಿಗೆ ಕೆಲಸ ನೀಡುವ ನಿರ್ಧಾರಕ್ಕೆ ಬಂದಿದೆ. ಇಂತದ್ದೇ ನಿರ್ಧಾರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಕಾರ್ಮಿಕರು ನಿರೀಕ್ಷಿಸುತ್ತಿದ್ದಾರೆ.








