ನವದೆಹಲಿ: ಸಂಸತ್ ನ ಬಜೆಟ್ ಅಧಿವೇಶನದ ದ್ವಿತೀಯಾರ್ಧ ಇಂದಿನಿಂದ ಆರಂಭವಾಗಿದ್ದು, ದೆಹಲಿ ಹಿಂಸಾಚಾರ ಕುರಿತು ಉಭಯ ಸದನಗಳಲ್ಲಿ ತೀವ್ರ ಗದ್ದಲ ಉಂಟಾಗಿದೆ. ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನಕ್ಕೆ ಸ್ಪೀಕರ್ ಓಂ ಬಿರ್ಲಾ ಅವರು ಆಗಮಿಸಿದರು. ಈ ವೇಳೆ ಕೆಲ ವಿರೋಧ ಪಕ್ಷದ ನಾಯಕರು ದೆಹಲಿ ಹಿಂಸಾಚಾರ ವಿಚಾರವನ್ನು ಪ್ರಸ್ತಾಪಿಸಲು ಮುಂದಾದರು. ಇದಕ್ಕೆ ಸ್ಪೀಕರ್ ಅವಕಾಶ ನೀಡದೆ ನಿಧನ ಹೊಂದಿದ ಜೆಡಿಯು ನಾಯಕ ಬೈದ್ಯನಾಥ್ ಪ್ರಸಾತ್ ಮಹ್ತೋ ಅವರಿಗೆ ಸಂತಾಪ ಸೂಚಿಸಿ ಕಲಾಪವನ್ನು ಮುಂದೂಡಿದರು.
ಇತ್ತ ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ದೆಹಲಿ ಹಿಂಸಾಚಾರ ಪ್ರಸ್ತಾಪಿಸಿ ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷ ಹಾಗೂ ಡಿಎಂಕೆ ಪಕ್ಷಗಳು ಸದನದ ಬಾವಿಗಿಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. ಇದರಿಂದಾಗಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಲಾಪವನ್ನು ಮುಂದೂಡಿದರು.