ಕೋಲಾರ: ಕರ್ನಾಟಕದ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸುವಂತಹ ಮತ್ತು ಲೋಕಾಯುಕ್ತ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಕಠಿಣ ಕ್ರಮವೊಂದಕ್ಕೆ ಉಪ ಲೋಕಾಯುಕ್ತರು ಮುಂದಾಗಿದ್ದಾರೆ. ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸಮಗ್ರ ಆಡಳಿತ ವ್ಯವಸ್ಥೆಯ ವಿರುದ್ಧವೇ ಸಮರ ಸಾರಲಾಗಿದ್ದು, ತಾಲೂಕಿನ ಎಲ್ಲಾ 25 ಗ್ರಾಮ ಪಂಚಾಯಿತಿಗಳ ವಿರುದ್ಧ ಇದೇ ಮೊದಲ ಬಾರಿಗೆ ಸ್ವಯಂ ಪ್ರೇರಿತ ದೂರು ದಾಖಲಿಸಲಾಗಿದೆ.
ಅವ್ಯವಸ್ಥೆಯ ಆಗರವಾದ ಪಂಚಾಯಿತಿಗಳು
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಳೆದ ಸೆಪ್ಟೆಂಬರ್ 30 ಮತ್ತು ಡಿಸೆಂಬರ್ 2 ರಂದು ಶ್ರೀನಿವಾಸಪುರ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ದಿಢೀರ್ ಭೇಟಿ ನೀಡಿದಾಗ ಕಂಡಿದ್ದು ಕೇವಲ ಅವ್ಯವಸ್ಥೆ ಮತ್ತು ಅರಾಜಕತೆ. ಜನರ ಮೂಲಭೂತ ಸೌಕರ್ಯಗಳಾದ ಚರಂಡಿ ನಿರ್ವಹಣೆ, ಶುದ್ಧ ಕುಡಿಯುವ ನೀರು, ಬೀದಿ ದೀಪಗಳು ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯ ಕಂಡುಬಂದಿದೆ. ಅಷ್ಟೇ ಅಲ್ಲದೆ, ಜಲಮೂಲಗಳ ಒತ್ತುವರಿ ಮತ್ತು ಅಕ್ರಮ ಗಣಿಗಾರಿಕೆಯಂತಹ ಗಂಭೀರ ವಿಷಯಗಳ ಬಗ್ಗೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಸಾಬೀತಾಗಿದೆ.
ಇಲ್ಲದ ರಸ್ತೆಗೆ ಬಿಲ್ ಪಾವತಿ: ಭ್ರಷ್ಟಾಚಾರದ ಪರಮಾವಧಿ
ಅಧಿಕಾರಿಗಳ ಭ್ರಷ್ಟಾಚಾರ ಯಾವ ಮಟ್ಟಕ್ಕೆ ಇಳಿದಿದೆ ಎಂದರೆ, ದಳಸನೂರು ಗ್ರಾಮ ಪಂಚಾಯಿತಿಯಲ್ಲಿ 2019-2020ರ ಸಾಲಿನಲ್ಲಿ ರಸ್ತೆ ನಿರ್ಮಾಣಕ್ಕೆಂದು ಬರೋಬ್ಬರಿ 3 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದು ದಾಖಲೆ ಸೃಷ್ಟಿಸಲಾಗಿದೆ. ಆದರೆ ಸ್ಥಳ ಪರಿಶೀಲನೆ ನಡೆಸಿದಾಗ ಅಲ್ಲಿ ರಸ್ತೆಯೇ ಅಸ್ತಿತ್ವದಲ್ಲಿಲ್ಲ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಚರಂಡಿ ಹೂಳು ತೆಗೆಯದಿದ್ದರೂ ಹಣ ಪಾವತಿ, ಮನ್ರೇಗಾ ಯೋಜನೆಯಡಿ ಕೆಲಸ ಮಾಡದೆಯೇ ಹಣ ಬಿಡುಗಡೆ, ಕೊಟೇಶನ್ ಇಲ್ಲದೆ ಮನಸೋ ಇಚ್ಛೆ ಬಿಲ್ ಕ್ಲಿಯರೆನ್ಸ್ ಮಾಡಿರುವುದು ಬಟಾಬಯಲಾಗಿದೆ.
ಪಿಡಿಒಗಳ ಅಮಾನತು ಮತ್ತು ಅಧಿಕಾರಿಗಳಿಗೆ ನಡುಕ
ತನಿಖೆಯ ಬಿಸಿ ಮುಟ್ಟುತ್ತಿದ್ದಂತೆಯೇ ಇಬ್ಬರು ಪಿಡಿಒಗಳ ತಲೆದಂಡವಾಗಿದೆ. ಬೋರ್‌ವೆಲ್ ದುರಸ್ತಿ ಹೆಸರಿನಲ್ಲಿ ಗುತ್ತಿಗೆದಾರರಿಗೆ 68 ಲಕ್ಷ ರೂ. ದುರ್ಬಳಕೆ ಆರೋಪದ ಮೇಲೆ ಅರಿಕುಂಟೆ ಪಿಡಿಒ ಎ.ಎನ್. ಶಂಕರಪ್ಪ ಮತ್ತು ಕರ್ತವ್ಯ ಲೋಪಕ್ಕಾಗಿ ನಂಬಿಹಳ್ಳಿ ಪಿಡಿಒ ಮಂಜುನಾಥ್ ಎನ್.ಕೆ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಶ್ರೀನಿವಾಸಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ (EO) ಸರ್ವೇಶ್ ಕೆ. ಅವರು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 232 (ಎ) ಉಲ್ಲಂಘಿಸಿರುವುದು ದೃಢಪಟ್ಟಿದ್ದು, ಅವರ ವಿರುದ್ಧವೂ ದೂರು ದಾಖಲಾಗಿದೆ.
ಡಿಜಿಟಲ್ ಪೇಮೆಂಟ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ
ಅಧಿಕಾರಿಗಳ ಮೊಬೈಲ್ ಗಳಲ್ಲಿರುವ ಡಿಜಿಟಲ್ ಪೇಮೆಂಟ್ ಆಪ್ ಗಳನ್ನು ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಸರ್ಕಾರಿ ನೌಕರರ ಅಧಿಕೃತ ಸಂಬಳಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಹಣದ ವಹಿವಾಟು ನಡೆದಿರುವುದು ಕಂಡುಬಂದಿದೆ. ಇದು ಲಂಚದ ರೂಪದಲ್ಲಿ ಪಡೆದ ಹಣ ಇರಬಹುದೆಂಬ ಬಲವಾದ ಸಂಶಯ ವ್ಯಕ್ತವಾಗಿದ್ದು, ಪಿಡಿಒಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್‌ಗಳು, ಎಂಜಿನಿಯರ್‌ಗಳು ಸೇರಿದಂತೆ ಇಡೀ ಜಾಲದ ವಿರುದ್ಧ ತನಿಖೆ ಚುರುಕುಗೊಂಡಿದೆ.
ರಾಜ್ಯದ ಇತರೆ ಜಿಲ್ಲೆಗಳಿಗೂ ಎಚ್ಚರಿಕೆ ಗಂಟೆ
ಇದು ಕೇವಲ ಶ್ರೀನಿವಾಸಪುರಕ್ಕೆ ಸೀಮಿತವಾದ ಕ್ರಮವಲ್ಲ, ಇದೊಂದು ಆರಂಭವಷ್ಟೇ ಎಂದು ನ್ಯಾಯಮೂರ್ತಿ ವೀರಪ್ಪ ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ತುಮಕೂರು ಮತ್ತು ಮಂಡ್ಯದಂತಹ ಜಿಲ್ಲೆಗಳಲ್ಲೂ ಇದೇ ಮಾದರಿಯ ಕಾರ್ಯಾಚರಣೆ ನಡೆಸಲು ಲೋಕಾಯುಕ್ತ ಸಜ್ಜಾಗಿದೆ. ಒಟ್ಟಾರೆ, ಈ ಐತಿಹಾಸಿಕ ಕ್ರಮವು ಗ್ರಾಮೀಣಾಭಿವೃದ್ಧಿಯ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದ ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿರುವುದಂತೂ ಸತ್ಯ..








