ಪ್ಯಾರ್‌ ದಿವಾನಾ ಹೋತಾ ಹೈ:

1 min read

ಪ್ಯಾರ್‌ ದಿವಾನಾ ಹೋತಾ ಹೈ:

–  ಕೃಪೆ ಹಿಂದವಿ ಸ್ವರಾಜ್

ಪ್ರೀತಿಯನ್ನು ಅಚಲವಾಗಿ ನಂಬಿದರೆ ಬದುಕು ಕೈ ಹಿಡಿದು ನಡೆಸುತ್ತದೆ; ಪ್ರೀತಿ ಬರೀ ಬಾಯಿ ಮಾತಿನ ಆದರ್ಶ ಮಾತ್ರ ಎಂದುಕೊಂಡರೇ..!

ಅವರಿಬ್ಬರು ತಮ್ಮ ಕಟ್ಟಕಡೆಯ ಅಹವಾಲು ಸಲ್ಲಿಸಲು ಬ್ಯೂಗಲ್‌ ರಾಕ್‌ ಪಾರ್ಕಿನ ಪಶ್ಚಿಮ ಮೂಲೆಯ ಕಲ್ಲುಬೆಂಚಿನ ಮೇಲೆ ಕುಳಿತುಕೊಂಡಿದ್ದರು. ಅವನಿಗೆ ಖಾತ್ರಿಯಾಗಿತ್ತು ಅವಳು ಅವನನ್ನು ಆ ದಿನ ಕೊನೆಯ ಬಾರಿಗೆ ಭೇಟಿ ಮಾಡಲು ಬಂದಿದ್ದಾಳೆ. ಆನಂತರ ಅವಳ ಅವನಿಂದ ಶಾಶ್ವತವಾಗಿ ದೂರವಾಗುತ್ತಾಳೆ. ಅವನಿಗೆ ಅದೊಂದು ಭಾವ ನಿಕ್ಕಿಯಾಗಿತ್ತು, ಅವಳು ಸಂಬಂಧವನ್ನು ಉಳಿಸಿಕೊಳ್ಳಲಾರಳು, ಅವಳಿಗೆ ಅವನಿಂದ ದೂರಾಗಲು ಒಂದು ಸ್ಪಷ್ಟವಾದ ನೆಪ ಬೇಕು. ಅದನ್ನವಳು ಆ ದಿನ ಹೇಳಿ ತಾನು ಕಾರಣ ಹೇಳಿಯೇ ಹೋಗುತ್ತೇನೆ ಅನ್ನುವ ಒಣ ತೃಪ್ತಿಯೊಂದಿಗೆ ಅವನ ಬದುಕಿನಿಂದ ನಿರ್ಗಮಿಸುತ್ತಾಳೆ. ಹಾಗೆಂದು ಅವನು ಅಲ್ಲಿಗೆ ಬರುವಾಗಲೇ ಖಚಿತಪಡಿಸಿಕೊಂಡಿದ್ದ, ಅವಳ ಕುರಿತಾಗಿ ಅವನ ಮನಸಿನ ಎಣಿಕೆ ಅಲ್ಲಿಯವರೆಗೆ ಸುಳ್ಳಾಗಿರಲಿಲ್ಲ. ಅವನ ಪಾಲಿಗದು ಅವಳೊಂದಿಗೆನ ಕೊನೆಯ ಸೂರ್ಯಾಸ್ತ. ಪಶ್ಚಿಮದ ಕಡೆಗೆ ಸೂರ್ಯ ನಿಧಾನಕ್ಕೆ ಜಾರತೊಡಗಿದ್ದರ ಕುರುಹಾಗಿ ಬಾನು ಕೇಸರಿ ರಂಗಿನಿಂದ ಫಳಫಳಿಸುತ್ತಿತ್ತು. 

ಆಗ ಅವಳಂದಳು, ಮುಂದಿನ ನಮ್ಮ ಬದುಕಿಗೆ, ಭವಿಷ್ಯಕ್ಕೆ ಹಣ ಬೇಕು.. ಭಾವನೆಗಳ ಮಬ್ಬಿನಿಂದ ಹೊರಗೆ ಬಾ. ವಾಸ್ತವ ಕಠೋರ, ದುರ್ಭರ. ಕೆಲವು ಸತ್ಯಗಳನ್ನು ನೀನು ಒಪ್ಪಿಕೊಳ್ಳಲೇಬೇಕು.  ಇವನಂದ, ಬದುಕೆಂದರೆ ಹಣ ಮಾಡುವುದಷ್ಟೇ ಅಲ್ಲ, ನಾವು ನೆಮ್ಮದಿಯಾಗಿ ಬದುಕಬೇಕು ಅಂದರೆ ನಮ್ಮ ಸುಂದರ ಬದುಕನ್ನು ಅನಿಶ್ಚಿತ, ಅಭದ್ರ ವಾಸ್ತವದ ಚಿಂತೆ, ಭವಿಷ್ಯದ ಯೋಚನೆ ತಿನ್ನಬಾರದು. 

ಮತ್ತೆ ಅವಳಂದಳು, ಆದರ್ಶಗಳು ಕೇವಲ ಮಾತಿಗಷ್ಟೆ, ಆಚರಣೆಗಿಳಿದ್ರೆ ಸಮಾಜ ಆಡಿಕೊಂಡು ನಗತ್ತೆ ಪೆದ್ದ.. ಬೆತ್ತಲೆ ಪ್ರಪಂಚದಲ್ಲಿ ಬಟ್ಟೆ ಹಾಕಿಕೊಳ್ಳೋನು ಮುಠ್ಠಾಳ. ನೀನು ಬಟ್ಟೆ ಹಾಕಬೇಡ ಕೊನೇಪಕ್ಷ ನನಗೋಸ್ಕರ ಕೌಪೀನ ತೊಟ್ಟು ತೃಪ್ತಿಪಟ್ಟುಕೊ.  ಇವನ ಮುಖದಲ್ಲಿ ಅದೇಕೋ ನಸುನಗೆ ಮೂಡಿತು, ಮೈ ಕೊಳೆಯಾಗದಿದ್ದರೆ ಮನಸಿನ ಕೊಳೆ ಅಳಿಸೋಕೆ ಸಾಧ್ಯವಿಲ್ಲ. ಹೊರಗೆ ಕಲುಷಿತಗೊಂಡರೆ ಮಾತ್ರ ಒಳಗೆ ಪ್ಯೂರ್ ಆಗ್ತೀವಿ. ನಾನು ದೇಹದ ಕೊಳೆಯನ್ನು ಗಮನಿಸೋನಲ್ಲ, ಮನಸಿನ ನಿರ್ಮಲತೆಯನ್ನು ಪ್ರೀತಿಸುವವನು. 

ಅವಳಂದಳು, ನಿನ್ನ ನೇರವಾದ ಬದಕು ನಮ್ಮ ಕನಸಿನ ಹಾದಿಯನ್ನು ಅಪೂರ್ಣಗೊಳಿಸ್ತಿದೆ ಅಂದಾಗ್ಲೂ ನೀನ್ ಕಾಂಪ್ರಮೈಸ್ ಆಗಲ್ವಾ..?

 ಇವನಂದ, ಬದುಕುವುದು ಒಂದೇ ಸಲ. ಕನಸು ಬೇಕಿದ್ರೆ ಸಾವಿರ ಸಲ ಮತ್ತೆ ಮತ್ತೆ ಕಾಣುತ್ತಲೇ ಇರಬಹುದು. ನಮಗೆ ಬೇಕಾದ ಹಾಗೆ ಕೂಡಾ ಕಾಣಬಹುದು. ನಮ್ಮ ತನವಿಲ್ಲದ ಬದುಕು ಇದ್ದರೆಷ್ಟು ಮುಗಿದರೆಷ್ಟು!

ಅದಕ್ಕೆ ಅವಳಂದಳು, ನನ್ನ ಹೇಗೆ ಸಾಕ್ತೀಯಾ? ನಿನ್ ಹತ್ರ ದುಡ್ಡಿಲ್ಲವಲ್ಲ. ದುಡ್ಡಿಲ್ಲದಿದ್ರೆ ಬದುಕು ಕಷ್ಟ. ಬಿ ಪ್ರಾಕ್ಟಿಕಲ್.‌ ಬರೀ ಪ್ರೀತಿ ಹೊಟ್ಟೆ ತುಂಬಿಸಲ್ಲ.  

ಇವನಂದ, ಕಣ್ಣಲ್ಲಿ ಕನಸಿದೆ, ಮನಸಲ್ಲಿ ಗುರಿಯಿದೆ, ಪ್ರಜ್ಞೆಯಲ್ಲಿ ಛಲವಿದೆ, ಭಾವನೆಯಲ್ಲಿ ನಿನ್ನ ಬಗ್ಗೆ ಪ್ರೀತಿ ಕಾಳಜಿಯಿದೆ, ವಾಸ್ತವದಲ್ಲಿ ನಿನ್ನ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಬಾರದು ಅನ್ನೋ ಕಾಮನ್ ಸೆನ್ಸ್ ಇದೆ. ದುಡಿಯುವ ಅರ್ಹತೆ, ಯೋಗ್ಯತೆ ಎಲ್ಲವೂ ಇದೆ. ಪ್ರೀತಿ ಒಂದು ಗಟ್ಟಿ ಸಂಕಲ್ಪ. ಅದೊಂದು ಗಟ್ಟಿಯಾಗಿದ್ದರೆ ದಾರಿಗಳು ತನ್ನಿಂತಾನೆ ತೆಗೆದುಕೊಳ್ಳುತ್ತವೆ. ಆದರೆ ಮೊದಲು ಪ್ರೀತಿಯನ್ನು ನಂಬಬೇಕು. ಬದುಕು ನಡೆಸಲು ಪ್ರೀತಿ ಕೈ ಹಿಡಿದು ಕರೆದೊಯ್ಯುತ್ತದೆ.  

 ಅವಳಂದಳು, ಆದ್ರೂ ದುಡ್ಡು ಬೇಕು. ಇಲ್ಲಾಂದ್ರೆ ನಮ್ ಮನೇಲಿ ನಿನ್ನ ಒಪ್ಪಲ್ಲ, ನಮ್ಮ ಸಮಾಜ ಆಡಿಕೊಳ್ಳತ್ತೆ, ಬರಿಗೈ ಫಕೀರನ್ನ ಕಟ್ಟಿಕೊಂಡ್ಳೂ ಅಂತ ಅಂಡು ಬಡಿದು ನಕ್ಕುಬಿಡತ್ತೆ. 

ಇವನಂದ, ಆಡಿಕೊಳ್ಳಲಿ ಬಿಡು, ನೀನು ಮೌನಿಯಾಗು. ಮುಂದೊಂದು ದಿನ ನಿನ್ನ-ನನ್ನ ಸಂತೋಷದ ದಾಂಪತ್ಯ ಕಂಡು ಅವ್ರು ಮೌನರಾಗ್ತಾರೆ. ನೀನು ಹೆಮ್ಮೆಯಿಂದ ಮಾತಾಡಬಹುದು.

ಅವಳಂದಳು, ನಿಂಗೆ ನನ್ ಮೇಲೆ ನಿಜಕ್ಕೂ ಪ್ರೀತಿ ಇಲ್ಲ. ಅದಕ್ಕೆ ಆದರ್ಶದ ಹೆಸರೇಳಿ, ನೆಪ ನೀಡಿ ನನ್ನಿಂದ ದೂರ ಹೋಗ್ತಿದ್ದೀಯಾ. ದುಡ್ಡಿಲ್ಲದಿದ್ರೆ ನನ್ ಹತ್ರ ಬರಬೇಡ. ನಮ್ ಮನೇಲಿ ಒಪ್ಸೋಕಾಗಲ್ಲ. ಅವ್ರ ವಿರೋಧ ಕಟ್ಕೊಳಾಗಲ್ಲ. ನಿಂಗೆ ಯಾರಾದ್ರೂ ಒಳ್ಳೇ ಹುಡುಗಿ ಸಿಕ್ತಾಳೆ. ನನ್ನ ಮರೆತು ಬಿಡು ಗುಡ್ ಬೈ. ಅವಳ ಕಣ್ಣಲ್ಲಿ ಕಣ್ಣೀರಂತೂ ಇತ್ತು. ತಿರುಗಿ ನೋಡದೆಯೇ ಎದ್ದು ಹೋದಳು. ಅವಳು ಅದನ್ನೇ ಮೊದಲ ಮಾತಾಗಿ ಹೇಳಬೇಕಿತ್ತು. ಕೊನೆಯ ಮಾತೆನ್ನುವಂತೆ ಹೇಳಿದಳು. ಅವನು ಅದನ್ನು ನಿರೀಕ್ಷಿಸಿಯೇ ಇದ್ದ.  

ಅವಳು ಎದ್ದು ಹೋದ ನಂತರ ಅವನು ಸ್ವಗತದಲ್ಲಿ ಹೇಳಿಕೊಂಡ, ಈಗ ನೆಪ ಒಡ್ಡಿ ನನ್ನಿಂದ ಕಳಚಿಕೊಂಡಿದ್ದು ಯಾರೇ ಅಭಿಸಾರಿಕೆ..?

ಬ್ಯೂಗಲ್ ಪಾರ್ಕ್‌ನ ಕಲ್ಲು ಬೆಂಚು ಯಾಕೋ ಬಿಸಿ ಹೆಚ್ಚಾಗಿತ್ತು. ಅವನು ತಲೆ ಎತ್ತಿ ನೋಡಿದ ಟೊಂಗೆಯ ಮೇಲೆ ಕಾಗೆಯೊಂದು ಅವನನ್ನೇ ನೋಡಿ ವ್ಯಂಗ್ಯ ಮಾಡಿ ನಗುವಂತೆ ಕೂತಿತ್ತು. ಅದೇ ವೇಳೆ ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಇನ್ನೊಬ್ಬಳು ಇವರ ಸಂಭಾಷಣೆಯನ್ನು ಕೇಳುತ್ತಿದ್ದವಳು ಅವನ ಮುಂದೆ ಬಂದು ನಿಂತಳು. 

ಆ ಇವಳಂದಳು, ಎಕ್ಸ್ ಕ್ಯೂಸ್ ಮಿ.. ಇಫ್ ಯೂ ಡೋಂಟ್ ಮೈಂಡ್ ನಾನ್ ನಿಮಗೆ ಸಮಾಧಾನ ಮಾಡಬಹುದಾ?

ಇವನಂದ, ನಾನು ನಿಮ್ಮಿಂದ ಸಿಂಪಥಿ ನಿರೀಕ್ಷಿಸೋದಿಲ್ಲ, ಆದ್ರೆ ನೀವು ಸಮಾಧಾನ ಮಾಡಿದ್ರೆ ಸಮಾಧಾನಿ ಆದ್ರೂ ಆಗಬಹುದು.

ಇವಳಂದಳು, ಆದ್ರೂ ಆ ಹುಡುಗಿ ನಿಮ್ಮನ್ನು ಬಿಟ್ಟು ಹೋಗಬಾರದಾಗಿತ್ತು. ಮುಂದೊಂದು ದಿನ ಬದುಕಿನಲ್ಲಿ ಹಣಕ್ಕಿಂತ, ಪ್ರತಿಷ್ಟೆಗಿಂತ ಪ್ರೀತಿ ಮುಖ್ಯ. ಹೇಗೆ ಬದುಕಿದ್ವೀ ಅನ್ನೋದು ಮುಖ್ಯ ಅನ್ನೋದು ರಿಯಲೈಸ್ ಆಗತ್ತೆ. 

ಇವನಂದ, ಇಷ್ಟು ವರ್ಷದಲ್ಲಿ ಆಗದ್ದು ಇನ್ನೊಂದಷ್ಟು ವರ್ಷದ ನಂತರ ಆಗುತ್ತೆ ಅಂತ ಕಾಯೋ ಸಹನೆ ಈಗ ನನ್ನಲ್ಲಿ ಉಳಿದಿಲ್ಲ ಅನ್ಸತ್ತೆ. 

ಇವಳಂದಳು, ನಿಮ್ಮ ಭಾವನೆ, ಆದರ್ಶ, ಬದುಕು ನೋಡುವ ದೃಷ್ಟಿಕೋನ ನಂಗೆ ಇಷ್ಟ ಆಯ್ತು. ನನ್ನ ಅಭಿರುಚಿ ನಿಮಗೆ ಹೊಂದಿಕೊಳ್ಳತ್ತೆ, ನಾನು ನಿಮ್ಮ ಪ್ರೀತಿ ಹಂಚಿಕೊಳ್ಳಬಹುದಾ.

ಇವನಂದ, ಸಾರಿ, ನನ್ ಹೃದಯದಲ್ಲಿ ಜಾಗ ಖಾಲಿ ಇಲ್ಲ. ಇರೋ ಜಾಗದಲ್ಲಿ ಅವಳು ಅತಿಕ್ರಮಿಸಿಕೊಂಡಿದ್ದಾಳೆ. ಅವಳು ಬರ್ತಾಳೆ ಅಂತ ಕಾಯೋ ಮೂರ್ಖ ನಾನು. ಯಾಕಂದ್ರೆ ಅವಳು ನನ್ನ ಅಭಿಸಾರಿಕೆ. ನಾನವಳ ಪಾಲಿನ ಮರೀಚಿಕೆ. 

ಇವಳಂದಳು, ಬದುಕು ಒಂದೇ, ಹೊಂದಾಣಿಕೆ ಅನ್ನೋದು ವ್ಯಕ್ತಿತ್ವದ ತಳಹದಿ ಅಲ್ಲಾಡಿಸಬಾರದು. ಆದರ್ಶವನ್ನು ಆಚರಣೆಗೆ ತರಬೇಕು. ಈ ಇವಳ ಮುಖದಲ್ಲಿ ಉತ್ಕಟ ಪ್ರೀತಿ ಕಾಣುತ್ತಿತ್ತು. ಅವನ ಮುಖಭಾವದಲ್ಲಿ ಅಚಲ ನಿರ್ಧಾರವೊಂದಿತ್ತು. ತಲೆ ಎತ್ತಿ ಮತ್ತೆ ಕಾಗೆ ಕಡೆ ನೋಡಿದ. ಅದು ನಾಚಿಕೆಯಿಂದ ತಲೆ ತಗ್ಗಿಸಿ ಹಾರಿ ಹೋಯ್ತು. ಬಿಸಿಯಾಗಿದ್ದ ಬ್ಯೂಗಲ್‌ ರಾಕಿನ ಕಲ್ಲಿನ ಬೆಂಚು ತಣ್ಣಗಾದ ಹಾಗಾಯ್ತು.

-ವಿ.ಬಿ 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd