ಮೊದಲ ಬಾರಿಗೆ ಡೈರಕ್ಟರ್ ಕ್ಯಾಪ್ ತೊಟ್ಟು ಸಿನಿಮಾ ಮಾಡಿದ್ದ ಡಾರ್ಲಿಂಗ್ ಕೃಷ್ಣ, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ವಾರ ರಿಲೀಸ್ ಆಗಿದ್ದ ಲವ್ ಮಾಕ್ಟೇಲ್ ಚಿತ್ರಕ್ಕೆ ಈಗ ಪ್ರದರ್ಶನಗಳು ಹೆಚ್ಚಿವೆ. ಚಿತ್ರಕ್ಕೆ ಮಾಲ್ ಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ನಟ ಕೃಷ್ಣ ದಿಲ್ ಖುಷ್ ಆಗಿದ್ದಾರೆ. ರಾಜ್ಯಾದ್ಯಂತ ೧೩೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ‘ಲವ್ ಮಾಕ್ಟೇಲ್’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದರೂ, ಗಳಿಕೆಯಲ್ಲಿ ಕೊಂಚ ಏರುಪೇರು ಉಂಟಾಗಿತ್ತು. ಇದರಿಂದಾಗಿ ಚಿತ್ರಮಂದಿರಗಳಲ್ಲಿ ಚಿತ್ರವನ್ನು ತೆಗೆಯಲಾಗಿತ್ತು. ಕೊನೆಗೆ, ಕೃಷ್ಣ ಅವರೇ.
ಸ್ವತಃ ಮಾಲ್ನ ಮುಖ್ಯಸ್ಥರಿಗೆ ಫೋನ್ ಮಾಡಿ, ಒಂದೊoದು ಶೋ ಕೊಡಿ ಎಂಬ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಮೈಸೂರಿನ ಮಾಲ್ವೊಂದರಲ್ಲಿ ಹಾಗೂ ರಾಕ್ಲೈನ್ ಮಾಲ್ನಲ್ಲಿ ‘ಲವ್ ಮಾಕ್ಟೇಲ್’ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ೨ ಶೋಗಳು ಹೌಸ್ ಫುಲ್ ಆಗಿದ್ದು, ನೋಡುಗರ ಪ್ರತಿಕ್ರಿಯೆ ಕಂಡು, ಭಾನುವಾರ, ಒರಾಯನ್, ಗೋಪಾಲನ್, ಈಟಾ ಹಾಗೂ ಮೈಸೂರು ಮಾಲ್ ಸೇರಿದಂತೆ ಇತರೆ ಕಡೆ ಹನ್ನೆರೆಡು ಪ್ರದರ್ಶನ ಹೆಚ್ಚಿಸಲಾಗಿದೆ. ಅತ್ತ, ಶಾರದಾ ಚಿತ್ರಮಂದಿರದಲ್ಲೂ ಪ್ರದರ್ಶನ ಮುಂದುವರೆಸಲಾಗಿದೆ.
ಇದು ಸಹಜವಾಗಿಯೇ ಕೃಷ್ಣ ಅವರಿಗೆ ಖುಷಿ ತಂದಿದ್ದು,’ಯಾವುದೇ ಒಂದು ಒಳ್ಳೆಯ ಸಿನಿಮಾಗೆ ಒಂದು ವಾರವಾದರೂ ಸಮಯ ಬೇಕು. ಈಗ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬೆಂಬಲಿಸಿದ ಕನ್ನಡಿಗರಿಗೆ ಧನ್ಯವಾದ’ ಎಂದಿದ್ದಾರೆ ಕೃಷ್ಣ.