ಲಕ್ನೋ: ಐಪಿಎಲ್ನ 34ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ತಂಡವು 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ 6 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಲಕ್ನೋಗೆ ನಾಯಕ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಆಸರೆಯಾಗಿ ತಂಡಕ್ಕೆ ಗೆಲುವು ತಂದರು. ರಾಹುಲ್ ಜೊತೆ ಕ್ವಿಂಟನ್ ಡಿ ಕಾಕ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಪವರ್ಪ್ಲೇ ಅಂತ್ಯಕ್ಕೆ ಲಕ್ನೋ ವಿಕೆಟ್ ನಷ್ಟವಿಲ್ಲದೆ 54 ರನ್ ಗಳಿಸಿ, ಆತ್ಮವಿಶ್ವಾಸ ಹೆಚ್ಚಿಸಿಕೊಂಡಿತ್ತು. ಕ್ವಿಂಟನ್ ಡಿ ಕಾಕ್ 43 ಎಸೆತಗಳಲ್ಲಿ 54 ರನ್ ಗಳಿಸಿದರು. ಕೆ.ಎಲ್ ರಾಹುಲ್ 53 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನಿಂದ 82 ರನ್ ಗಳಿಸಿ ಔಟಾದರು. ನಿಕೋಲಸ್ ಪೂರನ್ 12 ಎಸೆತಗಳಲ್ಲಿ 23, ಮಾರ್ಕಸ್ ಸ್ಟೊಯಿನಿಸ್ 8 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪಾತ್ರ ವಹಿಸಿದರು.
ಚೆನ್ನೈ ಪರ ಅಜಿಂಕ್ಯ ರಹಾನೆ ಮತ್ತು ರಚಿನ್ ರವೀಂದ್ರ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ರಚಿನ್ ರವೀಂದ್ರ ಸೊನ್ನೆಗೆ ಔಟಾದರು. ನಂತರ ಬಂದ ನಾಯಕ ಋತುರಾಜ್ ಗಾಯಕ್ವಾಡ್ 13 ಎಸೆತಗಳಲ್ಲಿ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ 3 ರನ್, ಸಮೀರ್ ರಿಜ್ವಿ 1 ರನ್ ಗಳಿಸಿದರು. ಆದರೆ, ಜಡೇಯಾ, ಮೊಯಿನ್ ಅಲಿ ಹಾಗೂ ಧೋನಿ ಉತ್ತಮವಾಗಿ ಆಡಿದರು. ಜಡೇಜಾ 40 ಎಸೆತಗಳಲ್ಲಿ 57 ರನ್ ಸಿಡಿಸಿದರು. ಮೊಯಿನ್ ಅಲಿ 20 ಎಸೆತಗಳಲ್ಲಿ 30 ರನ್ ಗಳಿಸಿದರೆ, ಮಾಜಿ ನಾಯಕ ಎಂಎಸ್ ಧೋನಿ 9 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ 28 ರನ್ ಸಿಡಿಸಿ ಮತ್ತೊಮ್ಮೆ ಅಭಿಮಾನಿಗಳನ್ನು ರಂಜಿಸಿದರು. ಅಲ್ಲದೇ, ಅಜೇಯರಾಗಿ ಉಳಿದರು.