ಈ ಮೂವರು ಆಟಗಾರರ ಮೇಲೆ ಲಕ್ನೋ ಫ್ರಾಂಚೈಸಿ ಕಣ್ಣು Lucknow saaksha tv
15 ನೇ ಆವೃತ್ತಿ ಇಂಡಿಯಲ್ ಪ್ರಿಮಿಯರ್ ಲೀಗ್ ಗಾಗಿ ಫ್ರಾಂಚೈಸಿಗಳು ತಯಾರಿ ಆರಂಭಿಸಿವೆ. ಮುಂದಿನ ಆವೃತ್ತಿಯಿಂದ ಐಪಿಎಲ್ ನಲ್ಲಿ ಹೊಸ ತಂಡಗಳು ಪಾಲ್ಗೊಳ್ಳುತ್ತಿರುವುದರಿಂದ ಟೂರ್ನಿ ಮತ್ತಷ್ಟು ರಸವತ್ತಾಗಲಿದೆ. ಲಕ್ನೋ ಮತ್ತು ಅಹಮದಾಬಾದ್ ತಂಡಗಳು ಮುಂದಿನ ವರ್ಷದಿಂದ ಐಪಿಎಲ್ ಸಂಗ್ರಾಮಕ್ಕೆ ಧುಮುಕಲಿವೆ. ಈ ಎರಡೂ ಫ್ರಾಂಚೈಸಿಗಳ ಪೈಕಿ ಲಕ್ನೋ ತಂಡ ಹೆಚ್ಚು ಉತ್ಸಾಹದಲ್ಲಿರುವಂತೆ ಕಾಣುತ್ತಿವೆ.
ಬಲಿಷ್ಠ ತಂಡವನ್ನು ಕಟ್ಟಬೇಕು ಅನ್ನೋ ಹಠಕ್ಕೆ ಬಿದ್ದಿರುವ ಲಕ್ನೋ ಸ್ಟಾರ್ ಆಟಗಾರರಿಗೆ ಮಣೆ ಹಾಕುತ್ತಿದೆ. ಅಲ್ಲದೇ ತಂಡ ಬ್ರ್ಯಾಂಡ್ ಹೆಚ್ಚಿಸುವ ಆಟಗಾರರ ಮೇಲೆ ಕಣ್ಣಿಟ್ಟಿದೆ. ಇದರ ಭಾಗವಾಗಿಯೇ ಸದ್ಯ ಟೀಂ ಇಂಡಿಯಾದಲ್ಲಿ ಮಿಂಚು ಹರಿಸುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಬುಟ್ಟಿಗೆ ಹಾಕಿಕೊಂಡಿದೆ. ಅಲ್ಲದೇ ರಾಹುಲ್ ಅವರಿಗೆ ತಂಡದ ನಾಯಕತ್ವ ವಹಿಸಿ ಬ್ರ್ಯಾಂಡ್ ಹೆಚ್ಚಿಸಿಕೊಳ್ಳಲು ಪ್ಲಾನ್ ಮಾಡುತ್ತಿದೆ.
ವರದಿಗಳ ಪ್ರಕಾರ ಕೆ.ಎಲ್ ರಾಹುಲ್ ಅವರನ್ನ ತಂಡದಲ್ಲಿ ಸೇರಿಸಿಕೊಳ್ಳಲು ಲಕ್ನೋ ಬರೋಬ್ಬರಿ 20 ಕೋಟಿ ವೆಚ್ಚಿಸಿದೆಯಂತೆ. ಇದು ಐಪಿಎಲ್ ಇತಿಹಾಸದಲ್ಲಿ ಆಟಗಾರನೊಬ್ಬ ಪಡೆಯುತ್ತಿರುವ ಅತ್ಯಂತ ದೊಡ್ಡ ಮೊತ್ತವಾಗಿದೆ. ಕೆ.ಎಲ್.ರಾಹುಲ್ ನೂರಕ್ಕೆ ನೂರಷ್ಟು ಲಕ್ನೋ ಫ್ರಾಂಚೈಸಿಯ ಕ್ಯಾಪ್ಟನ್ ಆಗೋದು ಪಕ್ಕಾ ಆಗಿದೆ.
ಇನ್ನು ಬಿಸಿಸಿಐ ನಿಯಮಗಳ ಪ್ರಕಾರ ಹೊಸ ತಂಡಗಳು ಮೆಗಾ ಹರಾಜಿಗೂ ಮುನ್ನ ನಾನ್ ರಿಟೈನ್ಡ್ ಆಟಗಾರರಲ್ಲಿ ಮೂವರನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. ಅದರಂತೆ ಲಕ್ನೋ ಫ್ರಾಂಚೈಸಿ ಕೆ.ಎಲ್ ರಾಹುಲ್ ಅವರನ್ನ ಆಯ್ಕೆ ಮಾಡಿಕೊಂಡಿದ್ದು, ಇನ್ನುಳಿದ ಇಬ್ಬರು ಆಟಗಾರರ ಖರೀದಿಸುವತ್ತ ಗಮನಹರಿಸಿದೆ.
ಲಕ್ನೋ ತಂಡ ಡಿಸೆಂಬರ್ 25 ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಮತ್ತು ವಿವರಗಳನ್ನು ಐಪಿಎಲ್ ಮಂಡಳಿಗೆ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಲಕ್ನೋ, ಕೆ ಎಲ್ ರಾಹುಲ್ ಜೊತೆಗೆ ಅಪ್ಘಾನ್ ನ ರಶೀದ್ ಖಾನ್ , ಯುವ ಆಟಗಾರ ಇಶಾನ್ ಕಿಶನ್ ಮೇಲೆ ಕಣ್ಣಿಟ್ಟಿದೆಯಂತೆ.
ರಶೀದ್ ಖಾನ್ ಹೈದರಾಬಾದ್ ತಂಡದಿಂದ ಹೊರಬಂದಿದ್ದು, ಮೆಗಾ ಹರಾಜಿಗೆ ಹೋಗಲು ನಿರ್ಧರಿಸಿದ್ದಾರೆ. ಆದ್ರೆ ಅವರನ್ನ ಲಕ್ನೋ ಫ್ರಾಂಚೈಸಿ ಬುಟ್ಟಿಗೆ ಹಾಕಿಕೊಳ್ಳಲು ಚಿಂತನೆ ನಡೆಸಿದೆಯಂತೆ. ರಶೀದ್ ಖಾನ್ ತಂಡದಲ್ಲಿದ್ದರೇ ಬ್ರ್ಯಾಂಡ್ ಕೂಡ ಹೆಚ್ಚಲಿದೆ. ಇನ್ನುಳಿದಂತೆ ಯುವ ಬ್ಯಾಟರ್ ಕಮ್ ವಿಕೆಟ್ ಕೀಪರ್ ಇಶಾನ್ ಕಿಶಾನ್ ಗೂ ಮಣೆ ಹಾಕಲು ಲಕ್ನೋ ಫ್ರಾಂಚೈಸಿ ನಿರ್ಧರಿಸಿದೆ.