ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.
ಮದ್ದೂರಿನಲ್ಲಿ ಪ್ರಚೋದನೆ ಮಾಡಿದವರು ಯಾರೇ ಆಗಿರಲಿ, ಅದನ್ನು ಸರ್ಕಾರ ಸಹಿಸುವುದಿಲ್ಲ. ಶಾಂತಿಯ ವಾತಾವರಣ ಕಾಪಾಡುವುದು ಎಲ್ಲರ ಜವಾಬ್ದಾರಿ. ಯಾರೇ ಗಲಭೆಗೆ ಕಾರಣರಾದರೂ, ಹಿಂದೂ ಇರಲಿ, ಮುಸ್ಲಿಂ ಇರಲಿ, ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪರಂ ಹೇಳಿದ್ದಾರೆ.
ಇದೇ ವೇಳೆ, ಈ ಘಟನೆಯನ್ನು ನೆಪ ಮಾಡಿಕೊಂಡು ಪ್ರತಿಪಕ್ಷ ನಾಯಕರ ನಿಯೋಗದ ಭೇಟಿಯ ಬಗ್ಗೆ ಅವರು ಪ್ರತಿಕ್ರಿಯಿಸಿ, ಯಾರೇ ಮದ್ದೂರಿಗೆ ಹೋಗಲಿ, ಬರಲಿ, ಅದರಲ್ಲಿ ನಮಗೆ ತೊಂದರೆ ಇಲ್ಲ. ಆದರೆ, ಜನರಲ್ಲಿ ಪ್ರಚೋದನೆ ಹುಟ್ಟಿಸುವಂತಹ ಕೆಲಸ ಮಾಡಿದರೆ ಖಂಡಿತ ಕಾನೂನು ಕ್ರಮಕ್ಕೆ ಒಳಗಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಘಟನೆಯಲ್ಲಿ ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ, ಮದ್ದೂರಿನ ಗಲಭೆ ಪ್ರಕರಣದಲ್ಲಿ ಸರ್ಕಾರ ಗಂಭೀರ ನಿಲುವು ತೆಗೆದುಕೊಂಡಿದ್ದು, ಧರ್ಮ ಬೇಧವಿಲ್ಲದೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.








