ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ (Maharashtra Assembly Polls) ಬಿಜೆಪಿ 99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಮೊದಲ ಪಟ್ಟಿಯಲ್ಲಿ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್, ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾಂಕುಲೆ ಸೇರಿದಂತೆ 99 ಅಭ್ಯರ್ಥಿಗಳಿಗೆ (Candidates) ಟಿಕೆಟ್ ನೀಡಲಾಗಿದೆ. ನಾಗ್ಪುರ ನೈಋತ್ಯ (ಸೌತ್ವೆಸ್ಟ್) ಕ್ಷೇತ್ರದಿಂದ ದೇವೇಂದ್ರ ಫಡ್ನವಿಸ್ (Devendra Fadnavis), ಕಮ್ತಿ ಕ್ಷೇದ್ರದಿಂದ ಬವಾಂಕುಲೆ ಕಣಕ್ಕೆ ಇಳಿದಿದ್ದಾರೆ. 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಸಿಎಂ ಏಕನಾಥ್ ಶಿಂಧೆ ಬಣದ ಶಿವಸೇನೆ ಮತ್ತು ಎನ್ ಸಿಪಿಯ ಅಜಿತ್ ಪವಾರ್ ಬಣದೊಂದಿಗೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಪಣ ತೊಟ್ಟಿದೆ. ಈ ಬಾರಿ ಮಹಾರಾಷ್ಟ್ರ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ. 26 ಜಿಲ್ಲೆಗಳ 288 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 4.97 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.