ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ (Channapatna Bypoll) ಎನ್ ಡಿಎ (NDA) ಅಭ್ಯರ್ಥಿ ಸ್ಪರ್ಧಿಸಲಿದ್ದು, ಎರಡು ದಿನಗಳಲ್ಲಿ ಹೆಸರು ಘೋಷಿಸಲಾಗುವುದು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಜೆಡಿಎಸ್ ನ ಕ್ಷೇತ್ರ. ಹೀಗಾಗಿ ಅವರ ನಿರ್ಧಾರವೇ ಅಂತಿಮ. ಸಿ.ಪಿ. ಯೋಗೇಶ್ವರ್ ಮನವೊಲಿಸಲು ನಾನು ಕೂಡ ಪ್ರಯತ್ನಿಸಿದ್ದೇನೆ. ಆದರೆ, ಕ್ಷೇತ್ರದ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಹೊರ ಬಿದ್ದಿಲ್ಲ. ಹಿಂದೆ ಕ್ಷೇತ್ರದಲ್ಲಿ ಕುಮಾರಸ್ವಾಮಿ ಶಾಸಕರಾಗಿದ್ದರು. ಹೀಗಾಗಿ ಅವರ ತೀರ್ಮಾನ ಪ್ರಮುಖವಾಗಿರುತ್ತದೆ.
ನಿಖಿಲ್ ಕುಮಾರಸ್ವಾಮಿಯವರು ಈಗಾಗಲೇ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ. ಸೀಟು ಅವರದ್ದೇ ಆಗಿರುವುದರಿಂದ ಹಾಗೂ ಎನ್‌ಡಿಎ ಭಾಗ ಆಗಿರುವುದರಿಂದ ಜೆಡಿಎಸ್‌ನವರ ಸಲಹೆ ಪ್ರಮುಖವಾಗಿರುತ್ತದೆ. ಅಂತಿಮವಾಗಿ ಎಲ್ಲವನ್ನೂ ಜನರು ತೀರ್ಮಾನಿಸುತ್ತಾರೆ. ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ರೈತರಿಗೆ ಪರಿಹಾರ ನೀಡಿಲ್ಲ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದಿದ್ದಾರೆ.