ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಿವಾಸ ಈಗ ಸುದ್ದಿ ಮಾಡಿದೆ.
ಹಿಂದೆ ಮಹೇಂದ್ರ ಸಿಂಗ್ ಧೋನಿಗೆ ಜಾರ್ಖಂಡ್ ಸರ್ಕಾರ ರಾಂಚಿಯಲ್ಲಿ 10 ಸಾವಿರ ಚದರ ಅಡಿ ಜಾಗ ನೀಡಿತ್ತು. ಈ ಜಾಗದಲ್ಲಿ ಮಹೇಂದ್ರ ಸಿಂಗ್ ಧೋನಿ ಐಷಾರಾಮಿ ಮನೆ ನಿರ್ಮಿಸಿದ್ದರು. ಆದರೆ, ಈಗ ಈ ಮನೆಯನ್ನು ಧೋನಿ ವಾಣಿಜ್ಯ ಉದ್ದೇಶದ ಬಳಕೆಗೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಮನೆಯಲ್ಲಿ ಡಯಾಗ್ನೋಸ್ಟಿಕ್ ಸೆಂಟರ್ ನಿರ್ಮಿಸಲಾಗುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಹೌಸಿಂಗ್ ಬೋರ್ಡ್ಗೆ ದೂರು ದಾಖಲಿಸಲಾಗಿದೆ. ಹೀಗಾಗಿ ಜಾರ್ಖಡ್ ಹೌಸಿಂಗ್ ಬೋರ್ಡ್ ಧೋನಿ ಅವರಿಂದ ಸ್ಪಷ್ಟನೆ ಕೇಳಿದೆ.
ವಸತಿ ಪ್ಲಾಟ್‌ಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸುವಂತಿಲ್ಲ. ಯಾವುದೇ ಪ್ರಕರಣದಲ್ಲಿ ಯಾವುದೇ ಉಲ್ಲಂಘನೆ ಕಂಡುಬಂದರೆ ಅದನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ ಎಂದು ಜಾರ್ಖಂಡ್ ಹೌಸಿಂಗ್ ಬೋರ್ಡ್ ಹೇಳಿದೆ.
ಕೆಲವು ವರ್ಷಗಳ ಹಿಂದೆಯೂ ಈ ಮನೆಯಿಂದ ಸಾಕಷ್ಟು ವಿವಾದಗಳು ಎದ್ದಿದ್ದವು. 2016ರಲ್ಲಿ ನಗರದಲ್ಲಿ ನೀರಿನ ಅಭಾವ ಉಂಟಾದಾಗ ಧೋನಿ ತನ್ನ ಈಜುಕೊಳಕ್ಕೆ ಪ್ರತಿದಿನ 15 ಸಾವಿರ ಲೀಟರ್ ನೀರು ವ್ಯಯಿಸುತ್ತಿದ್ದಾರೆ. ಇದರಿಂದ ತಮ್ಮ ಮನೆಗೆ ಸರಿಯಾಗಿ ನೀರು ಸಿಗುತ್ತಿಲ್ಲ ಎಂದು ಕೂಡ ಹಲವರು ಆರೋಪಿಸಿದ್ದರು.