ಸದ್ಯ ಆರ್.ಆರ್.ಆರ್ ಸಿನಿಮಾದಲ್ಲಿ ಬ್ಯುಸಿ ಆಗಿರುವ ಎಸ್ ಎಸ್ ರಾಜಮೌಳಿ, ತಮ್ಮ ಮುಂದಿನ ಸಿನಿಮಾ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಅಂತಾ ಹೇಳಿದ್ದಾರೆ. ಆದ್ರೆ ಚಿತ್ರದ ಕಥೆಯ ಬಗ್ಗೆಯಾಗಲಿ, ಮಹೇಶ್ ಬಾಬು ಪಾತ್ರದ ಬಗ್ಗೆ ಆಗಲಿ ಜಕ್ಕನ್ನ ಯಾವುದೇ ಮಾಹಿತಿ ನೀಡಿಲ್ಲ.
ಏತನ್ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಬಾಬು ಅವರ ಪೋಸ್ಟರ್ ಒಂದು ಸಖತ್ ವೈರಲ್ ಆಗುತ್ತಿದ್ದು, ರಾಜಮೌಳಿ ಸಿನಿಮಾದಲ್ಲಿ ಸೂಪರ್ ಸ್ಟಾರ್ ರಾಮನಾಗಿ ಮಿಂಚಲಿದ್ದಾರೆ ಎನ್ನುವ ಮಾತುಗಳು ಶುರುವಾಗಿದೆ.
ಈ ಪೋಸ್ಟರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಶ್ರೀರಾಮನ ಪಾತ್ರಕ್ಕೆ ಮಹೇಶ್ ಬಾಬುಗಿಂತ ಒಳ್ಳೆ ಆಯ್ಕೆ ಇಲ್ಲ ಎಂದು ಕೆಲವರು ಹೇಳುತ್ತಿದ್ದರೇ, ಇನ್ನೂ ಕೆಲವರು ಪೋಸ್ಟರ್ ಗೆ ಫಿದಾ ಎನ್ನುತ್ತಿದ್ದಾರೆ.
ಇದು ಫ್ಯಾನ್ ಮೇಡ್ ಪೋಸ್ಟರ್’
ಹೌದು..! ಸದ್ಯ ವೈರಲ್ ಆಗುತ್ತಿರುವ ಪೋಸ್ಟರ್ ಫ್ಯಾನ್ ಮೇಡ್ ಆಗಿದೆ. ಮಹೇಶ್ ಬಾಬು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡ್ರೆ, ಹೇಗಿರುತ್ತೆ ಅಂತ ಊಹಿಸಿಕೊಂಡು ಅಭಿಮಾನಿಯೊಬ್ಬ ಮಾಡಿರೋ ಪೋಸ್ಟರ್ ಇದು. ಮಹೇಶ್ ಬಾಬು ರಾಮನ ಅವತಾರದಲ್ಲಿ ಬಿಲ್ಲು ಬಾಣ ಹಿಡಿದು ನಿಂತಿರುವಂತೆ ಪೋಸ್ಟರ್ ಡಿಸೈನ್ ಮಾಡಲಾಗಿದೆ.
ಅಂದ್ಹಾಗೆ ನಿರ್ದೇಶಕ ರಾಜಮೌಳಿ ಫಿಕ್ಷನ್ ಫ್ಯಾಂಟಸಿ ಸಿನಿಮಾಗಳನ್ನ ಮಾಡೋದ್ರಲ್ಲಿ ಸಿದ್ಧಹಸ್ತರು. ಮಹಾಭಾರತ ತಮ್ಮ ಡ್ರೀಮ್ ಪ್ರಾಜೆಕ್ಟ್ ಅಂತಲೂ ಜಕ್ಕನ್ನ ಹೇಳಿದ್ದಾರೆ. ಆದರೆ, ರಾಮಾಯಣ ಸಿನಿಮಾ ಬಗ್ಗೆ ಅವರು ಎಂದೂ ಮಾತನಾಡಿಲ್ಲ. ಅದರಲ್ಲೂ ಮಹೇಶ್ ಬಾಬು ಸಿನಿಮಾ ವಿಚಾರದಲ್ಲಿ ಈಗಾಗಲೇ ಅವರೊಂದು ಸುಳಿವು ನೀಡಿದ್ದಾರೆ. ಆರ್ ಆರ್ ಆರ್ ಸಿನಿಮಾ ಪ್ರೆಸ್ ಮೀಟ್ ನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮೌಳಿ, ಮಹೇಶ್ ಬಾಬು ಜೊತೆ ಜೇಮ್ಸ್ ಬಾಂಡ್ ರೀತಿಯ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ಕಾರಣವೂ ಇದೆ.
ಸೂಪರ್ ಸ್ಟಾರ್ ಮಹೇಶ್ ಬಾಬು, ಹಾಲಿವುಡ್ ಸ್ಟೈಲ್ ಹೀರೋ. ಹೀಗಾಗಿ ರಾಜಮೌಳಿ ತಮ್ಮ ಸಿನಿಮಾದಲ್ಲಿ ಇದೇ ರೀತಿ ಟಾಲಿವುಡ್ ಪ್ರಿನ್ಸ್ ನ ಪ್ರಸೆಂಟ್ ಮಾಡ್ತಾರೆ ಅನ್ನೋ ನಿರೀಕ್ಷೆ ಕೂಡ ಇದೆ. ಅದರಲ್ಲೂ ರಾಜಮೌಳಿ ತಮ್ಮ ಕಥೆಗೆ ತಕ್ಕ ನಾಯಕನನ್ನ ಆಯ್ಕೆ ಮಾಡಿಕೊಳ್ತಾರೆ. ಹಾಗಾಗಿ ತಮ್ಮ ಮುಂದಿನ ಚಿತ್ರಕ್ಕೆ ಯಾವ ಕಥೆ ಸಿದ್ಧಪಡಿಸ್ತಿದ್ದಾರೆ ಗೊತ್ತಿಲ್ಲ. ಆ ಕಥೆಯಲ್ಲಿ ಮಹೇಶ್ ಬಾಬು ಪಾತ್ರ ಏನ್ ಆಗಿರುತ್ತೆ ಅನ್ನೋದು ಹೇಳೋದಕ್ಕೆ ಆಗೋದಿಲ್ಲ.








