125 ಮಕ್ಕಳ ಹಾರ್ಟ್ ಸರ್ಜರಿಗೆ ಮುಂದಾದ ಹೃದಯವಂತ ಮಹೇಶ್ ಬಾಬು…
ಹಲವು ಖ್ಯಾತ ತಾರೆಯರು ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಹೀರೋಗಳಾಗಿದ್ದಾರೆ. ಸಮಾಜಮುಖಿಯಾಗಿ ಬದುಕುತಿದ್ದಾರೆ. ಅದರಲ್ಲಿ ತೆಲುಗಿನ ನಟ ಮಹೇಶ್ ಬಾಬು ಕೂಡ ಒಬ್ಬರು.
ಸೂಪರ್ ಸ್ಟಾರ್ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿಡುಗಡೆಯಾದ ದಿನವೇ ಚಿತ್ರಗಳು ಕೋಟಿ ಕೋಟಿ ಬಾಚುತ್ತವೆ. ಸಿನಿಮಾವೊಂದಕ್ಕೆ ಮಹೇಶ್ ಬಾಬು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತುಗಳ ನಟನೆಯಿಂದಲೂ ಕೈ ತುಂಬ ಹಣ ಪಡೆಯುತ್ತಾರೆ.
ಹೀಗೆ ಕೋಟ್ಯಂತರ ರೂಪಾಯಿ ಗಳಿಸುವ ಅವರು ಸಮಾಜಮುಖಿ ಕೆಲಸಗಳಿಗಾಗಿಯೂ ತಮ್ಮ ಆದಾಯದ ಒಂದು ಪಾಲನ್ನು ಮೀಸಲು ಇರಿಸಿದ್ದಾರೆ. ಜನಪರ ಕಾರ್ಯಗಳಿಗಾಗಿಯೇ ‘ಮಹೇಶ್ ಬಾಬು ಫೌಂಡೇಶನ್’ ಮೂಲಕ ಹಗಲಿರುಳು ಸೇವೆ ನೀಡಲಾಗುತ್ತಿದೆ.
ಈಗ ಇನ್ನೊಂದು ವಿಶೇಷ ಕಾಳಜಿಗಾಗಿ ಮಹೇಶ್ ಬಾಬು ಮುಂದೆ ಬಂದಿದ್ದಾರೆ. ಹೃದಯದ ಸಮಸ್ಯೆಯಿಂದ ಬಳಲುವ ಪುಟ್ಟ ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಮಹೇಶ್ ಬಾಬು ಫೌಂಡೇಶನ್ ಪಣ ತೊಟ್ಟಿದೆ. ಮಕ್ಕಳ ಹಾರ್ಟ್ ಸರ್ಜರಿಗೆ ಈ ಸಂಸ್ಥೆ ನೆರವು ನೀಡಲಿದೆ.
ಹೈದರಾಬಾದ್ನ ರೇನ್ಬೋ ಚಿಲ್ರನ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ಜೊತೆ ಮಹೇಶ್ ಬಾಬು ಕೈ ಜೋಡಿಸಿದ್ದಾರೆ. ಪ್ಯೂರ್ ಲಿಟಲ್ ಹಾರ್ಟ್ ಫೌಂಡೇಶನ್ ಸ್ಥಾಪಿಸಿ, ಅದರ ಮೂಲಕ ಮಕ್ಕಳ ಹೃದಯದ ಚಿಕಿತ್ಸೆಗೆ ನೆರವು ನೀಡಲಾಗುತ್ತದೆ. ಇತ್ತೀಚೆಗೆ ಇದರ ಲಾಂಚಿಂಗ್ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಭಾಗಿ ಆಗಿದ್ದರು. ಈ ಮೂಲಕ ಅವರು 125 ಮಕ್ಕಳ ಹಾರ್ಟ್ ಸರ್ಜರಿಗೆ ನೆರವಾಗಲಿದ್ದಾರೆ.