ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸುವ ವ್ಯವಸ್ಥೆಯನ್ನು ರಾಜ್ಯ ಸರಕಾರ ಸರಿಯಾಗಿ ನಿಭಾಯಿಸದೇ ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಪ್ರಬಲ ಅಸ್ತ್ರವನ್ನು ತಾನಾಗಿಯೇ ನೀಡಿದೆ. ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಘಟಾನುಗಟಿಗಳು, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಬೀಡು ಬಿಟ್ಟಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಹೆಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಲೀಂ ಅಹಮದ್ ಆದಿಯಾಗಿ, ಪ್ರಮುಖ ಮುಖಂಡರು, ಕಾರ್ಮಿಕರ ಯೋಗಕ್ಷೇಮ ವಿಚಾರಿಸುವ ಹೆಸರಿನಲ್ಲಿ, ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ, ಪಕ್ಷದ ಪರ ಹೋರಾಟಕ್ಕೆ ನಿಂತಿದ್ದಾರೆ.
ಇಲ್ಲಿ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ವಿಚಾರದಲ್ಲಿ ಬಿಎಸ್ ವೈ ಸರಕಾರ ಯೋಜನಾಬದ್ಧವಾಗಿ ಕೆಲಸ ಮಾಡಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ. ಮೊದಲು, ದುಪ್ಪಟ್ಟು ಬಸ್ ದರ ನಿಗದಿ ಪಡಿಸಿ, ಆಮೇಲೆ ಪ್ರತಿಭಟನೆ ವ್ಯಕ್ತವಾದ ನಂತರ, ಅದನ್ನು ಇಳಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ಮೆಜಿಸ್ಟಿಕ್ ಕಡೆ ಬಂದಿದ್ದರಿಂದ, ವಲಸೆ ಕಾರ್ಮಿಕರ ಪಾಡು ಹೇಳತೀರದಾಗಿತ್ತು.
ಇದರ ಮುಂದುವರಿದ ಭಾಗವಾಗಿ ಇಂದು ಸರಕಾರ ನಿರೀಕ್ಷಿಸದ ಮಟ್ಟದಲ್ಲಿ ಮೆಜೆಸ್ಟಿಕ್ ಗೆ ಜನ ಆಗಮಿಸಿದ್ದರಿಂದ, ಸಾರಿಗೆ ಸಂಸ್ಥೆ ಅಧಿಕಾರಿಗಳು, ಪೊಲೀಸರು ಪರದಾಡುವಂತಾಯಿತು. ಊಟ ತಿಂಡಿ, ನೀರಿನ ವ್ಯವಸ್ಥೆಯಿಲ್ಲದೇ ಕಾರ್ಮಿಕರು ಹೈರಾಣವಾಗಿ ಹೋಗಿದ್ದರು. ಆ ವೇಳೆ, ಕಾಂಗ್ರೆಸ್ ಮುಖಂಡರ ರಂಗ ಪ್ರವೇಶವಾಯಿತು.
ಬಸ್ ನಿಲ್ದಾಣಕ್ಕೆ ಬಂದ ಕೈ ನಾಯಕರು ಪ್ರಯಾಣಿಕರ ಜೊತೆ ಚರ್ಚಿಸಿದರು. ಬಳಿಕ ಡಿಕೆಶಿ ಮತ್ತು ಸಿದ್ದರಾಮಯ್ಯ, ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದರು. “ಗಾಬರಿಯಾಗಬೇಡಿ, ಸುರಕ್ಷಿತವಾಗಿ ಊರಿಗೆ ಹೋಗಿ. ನಿಮ್ಮೊಂದಿಗೆ ರಾಜ್ಯ ಸರ್ಕಾರ ಇದೆ, ನಾವಿದ್ದೇವೆ ಧೈರ್ಯವಾಗಿರಿ. ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಊಟ ಮಾಡಿಕೊಳ್ಳಿ ಗಾಬರಿಯಾಗಬೇಡಿ, ಸುರಕ್ಷಿತವಾಗಿ ಊರಿಗೆ ಹೋಗಿ ” ಎಂದು ಪ್ರಯಾಣಿಕರಲ್ಲಿ ಧೈರ್ಯ ತುಂಬಿದರು.