ಬೀದರ್: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಗಾಳಿ ಬೀಸುತ್ತಿರುವ ನಡುವೆಯೇ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ವೇಳೆ ರಾಜೀನಾಮೆ ನೀಡಿದರೆ, ಆ ಸ್ಥಾನಕ್ಕೆ ಅತ್ಯಂತ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ. ಜಿ. ಪರಮೇಶ್ವರ್ ಅವರನ್ನು ನೇಮಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೀದರ್ ನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಎಂಟು ವರ್ಷಗಳ ಕಾಲ ರಾಜ್ಯವನ್ನು ಆಳಿದ ಪ್ರಭಾವಿ ನಾಯಕರು. ಅವರಿಗೆ ಹೈಕಮಾಂಡ್ ಸೂಕ್ತ ಗೌರವ ನೀಡಬೇಕಿತ್ತು. ಆದರೆ ದೆಹಲಿಗೆ ಹೋದಾಗ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಅತ್ಯಂತ ಕಠೋರವಾಗಿ ನಡೆಸಿಕೊಂಡಿದ್ದಾರೆ ಎಂಬ ಸುದ್ದಿ ಇದೆ. ಕೂಡಲೇ ರಾಜೀನಾಮೆ ಸಲ್ಲಿಸಿ ಎಂದು ಅವರಿಗೆ ತಾಕೀತು ಮಾಡಲಾಗಿದೆ ಎನ್ನಲಾಗಿದೆ. ಹಿರಿಯ ನಾಯಕರೊಬ್ಬರನ್ನು ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ. ಸಿದ್ದರಾಮಯ್ಯನವರ ಅಭಿಮಾನಿಗಳಿಗೆ ಇದರಿಂದ ಅಸಮಾಧಾನವಾಗುವುದು ಮತ್ತು ಆಕ್ರೋಶ ಬರುವುದು ಸಹಜ ಎಂದು ಹೇಳಿದರು.
ಕಾಂಗ್ರೆಸ್ ಹೈಕಮಾಂಡ್ ಎಂದರೆ ಕೇವಲ ಗಾಂಧಿ ಕುಟುಂಬ ಮಾತ್ರವೇ ಎಂದು ಪ್ರಶ್ನಿಸಿದ ಛಲವಾದಿ, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದರೂ ಅವರಿಗೆ ಅಧಿಕಾರ ನೀಡುವಲ್ಲಿ ಬೆಲೆ ಇಲ್ಲದಂತಾಗಿದೆ. ಖರ್ಗೆ ಅವರಂತಹ ಎತ್ತರದ ವ್ಯಕ್ತಿತ್ವದ ದಲಿತ ನಾಯಕರು ದೇಶದಲ್ಲಿ ಬೇರೆ ಯಾರಿದ್ದಾರೆ? ಅವರಿಗೇ ಮುಖ್ಯಮಂತ್ರಿ ಸ್ಥಾನ ನೀಡಬಹುದಿತ್ತು. ಆದರೆ ಕಾಂಗ್ರೆಸ್ ಕಳೆದ 80 ವರ್ಷಗಳಿಂದ ದಲಿತ ಸಮುದಾಯವನ್ನು ಕೇವಲ ವಂಚಿಸುತ್ತಾ ಬಂದಿದೆ ಎಂದು ಕಿಡಿಕಾರಿದರು.
ಈ ಬಾರಿಯಾದರೂ ದಲಿತ ನಾಯಕರು ಸಿಎಂ ಆಗುತ್ತಾರೆ ಎಂದು ರಾಜ್ಯದ ಜನರು ಭಾವಿಸಿದ್ದರು. ಆದರೆ ಕಾಂಗ್ರೆಸ್ ಈಗಲೂ ಅಂತಹ ನಿರ್ಧಾರಕ್ಕೆ ಬಂದಿಲ್ಲ. ದಲಿತರನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುವ ಕಾಂಗ್ರೆಸ್ ಪಕ್ಷದ ಧೋರಣೆ ಹೀಗೆಯೇ ಮುಂದುವರಿದರೆ, ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಪಕ್ಷವು ಕರ್ನಾಟಕದಲ್ಲಿಯೂ ಇನ್ನು ಮುಂದೆ ಎಂದಿಗೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು.







