ಬೆಂಗಳೂರು: ರಾಜ್ಯದ ಶಾಲಾ ಮಕ್ಕಳ ಸುದೀರ್ಘ ಬೇಸಿಗೆ ರಜೆ ಮುಕ್ತಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ಶೈಕ್ಷಣಿಕ ವರ್ಷದ ಕಲಿಕಾ ಹಬ್ಬಕ್ಕೆ ಜೂನ್ 1ರಂದು ಅಧಿಕೃತವಾಗಿ ಚಾಲನೆ ಸಿಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಶಾಲಾ ಆವರಣಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಬರಲಿದೆ.
ಶಾಲಾ ಪುನಾರಂಭದ ಕುರಿತು ಮಾತನಾಡಿರುವ ಸಚಿವರು, ರಾಜ್ಯದ ಸಾವಿರಾರು ಶಾಲೆಗಳಲ್ಲಿ ಸಿದ್ಧತೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಎಸ್‌ಡಿಎಂಸಿ ಜೊತೆ ಸಮಾಲೋಚನೆ ನಡೆಸಲಾಗಿದ್ದು, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಶಾಲಾ ಆವರಣದ ಸ್ವಚ್ಛತೆ ಮತ್ತು ಮೂಲಸೌಕರ್ಯಗಳ ಕುರಿತು ವಿಶೇಷ ಗಮನ ಹರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಬಾರಿ ಪಠ್ಯಪುಸ್ತಕಗಳ ವಿತರಣೆಯಲ್ಲಿ ಸರ್ಕಾರ ವೇಗವನ್ನು ಕಾಯ್ದುಕೊಂಡಿದೆ. ಸುಮಾರು ಶೇ 95 ರಿಂದ 96ರಷ್ಟು ಪಠ್ಯಪುಸ್ತಕಗಳು ಹಾಗೂ ನೋಟ್‌ಬುಕ್‌ಗಳು ಈಗಾಗಲೇ ಎಲ್ಲಾ ಶಾಲೆಗಳಿಗೆ ತಲುಪಿವೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಕ್ಕಳು ತಮ್ಮ ಕೈಯಲ್ಲಿ ಪುಸ್ತಕ ಹಿಡಿಯಬೇಕು ಎಂಬ ಉದ್ದೇಶದಿಂದ ಇಲಾಖೆಯು ಯುದ್ಧೋಪಾದಿಯಲ್ಲಿ ಕೆಲಸ ಮಾಡಿದೆ. ಕಲಿಕಾ ಸಾಮಗ್ರಿಗಳ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಜೂನ್ 1ರ ಶಾಲಾ ಪ್ರಾರಂಭೋತ್ಸವವನ್ನು ಕೇವಲ ಶಾಲಾ ಕಾರ್ಯಕ್ರಮವನ್ನಾಗಿ ಮಾಡದೆ, ಸಮುದಾಯದ ಹಬ್ಬವನ್ನಾಗಿ ಆಚರಿಸಲು ಸಚಿವರು ಕರೆ ನೀಡಿದ್ದಾರೆ. ಶಾಲಾ ಸ್ವಾಗತ ಕಾರ್ಯಕ್ರಮಗಳಲ್ಲಿ ಪೋಷಕರು, ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಕ್ಕಳನ್ನು ಆತ್ಮೀಯವಾಗಿ ಬರಮಾಡಿಕೊಳ್ಳಬೇಕು. ಈ ಮೂಲಕ ಮಕ್ಕಳಲ್ಲಿ ಶಾಲೆಯ ಬಗ್ಗೆ ಪ್ರೀತಿ ಮತ್ತು ಗೌರವ ಮೂಡುವಂತೆ ಮಾಡಬೇಕು ಎಂದು ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಶೈಕ್ಷಣಿಕ ಚಟುವಟಿಕೆಗಳ ಸಿದ್ಧತೆ ನಡೆಸುತ್ತಿರುವ ಶಿಕ್ಷಕರು ಮತ್ತು ಅಧಿಕಾರಿಗಳಿಗೆ ಸಚಿವರು ಧನ್ಯವಾದ ಅರ್ಪಿಸಿದ್ದು, ಈ ವರ್ಷ ಗುಣಮಟ್ಟದ ಶಿಕ್ಷಣ ನೀಡಲು ಇಲಾಖೆ ಸರ್ವಸನ್ನದ್ಧವಾಗಿದೆ ಎಂದು ಹೇಳಿದ್ದಾರೆ.







