ಮಲೆನಾಡಿನ ರಾಜಮಾರ್ಗಗಳು ಮತ್ತು ಧೂಪದ ಮರಗಳ ಸಾಲು; ಮುಳುಗಿ ಹೋದ ಪರಂಪರೆ: Saakshatv Naavu kelada charitre episode10
ದೂರದ ಡಚ್, ಲಂಡನ್ ಮತ್ತು ಫೋರ್ಚುಗೀಸ್ ಆರ್ಕೈವ್ಸ್ ನಲ್ಲಿ ಇರುವ ದಾಖಲಾತಿಗಳನ್ನು ಪರಿಶೋಧಿಸಿದರೆ ಅದರಲ್ಲಿ ಇಂದಿನ ಕರ್ನಾಟಕ್ಕೆ ಸಂಬಂಧಿಸಿದ ಬಿದನೂರು ಅಂದರೆ ಇಕ್ಕೇರಿ ನಾಯಕರ ಮಲೆನಾಡು ಮತ್ತು ಕರಾವಳಿ ಪ್ರದೇಶದ ದಾಖಲಾತಿಗಳೇ ಹೆಚ್ಚು ಇರುವುದು. ಇಕ್ಕೇರಿ ಸಂಸ್ಥಾನದ ಧೂಪದ ಮರಗಳ ಸಾಲಿನ ರಾಜಮಾರ್ಗಗಳು ಎಷ್ಟರಮಟ್ಟಿಗೆ ಪ್ರಸಿದ್ಧಿ ಪಡೆದಿತ್ತು ಅಂದರೆ ದೂರದ ಫೋರ್ಚುಗೀಸ್ ಆರ್ಕೈವ್ ನಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ಇಡೀ ಕೋಣೆ ತುಂಬುವಷ್ಟು ದಾಖಲೆಗಳನ್ನು ಸಂಗ್ರಹಿಸಿ ಇಡಲಾಗಿದೆ. Saakshatv Naavu kelada charitre episode10

ಇನ್ನೂ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕರ್ನಾಟಕದ ಅತಿ ಶ್ರೀಮಂತ, ಪ್ರಭಾವಿ ಮತ್ತು ಬಲಿಷ್ಠ ರಾಜ್ಯವಾಗಿ ಹೊರಹೊಮ್ಮಿದ ಇಕ್ಕೇರಿ ಸಂಸ್ಥಾನ ಅಂದು ವಿದೇಶೀ ವ್ಯಾಪಾರಸ್ಥರ ಅಚ್ಚು ಮೆಚ್ಚಿನ ತಾಣವಾಗಿತ್ತು. ಫೋರ್ಚುಗೀಸ್ ಅವರ ದಾಖಲಾತಿಯ ಪ್ರಕಾರ 1600ರಲ್ಲೆ ವಿಜಯನಗರದ ಅಧೀನದಲ್ಲಿರುವ ಇಕ್ಕೇರಿ ನಾಯಕರು ಅಂದಿನ ಕಾಲದಲ್ಲೇ ಕಬ್ಬಿಣದ ರಾಕೆಟ್, ಕತ್ತಿ, ಫಿರಂಗಿ, ಬಂದೂಕು ಮತ್ತು ಇತರೆ ಆಯುಧ ತಯಾರಿಕೆಯಲ್ಲಿ ಉನ್ನತ ಮಟ್ಟದ ತಂತ್ರಜ್ಞಾನವನ್ನು ಹೊಂದಿರುವ ಬಗ್ಗೆ ಉಲ್ಲೇಖವಿರುವುದು ನಿಜಕ್ಕೂ ನಮಗೆಲ್ಲರಿಗೂ ಹೆಮ್ಮೆ ಪಡುವ ಸಂಗತಿ. ನೀರಾವರಿ ಪದ್ಧತಿಯಲ್ಲಿ ವಿಜಯನಗರದ ರಾಯರ ನಂತರ ಅದನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋದ ಕೀರ್ತಿ ಸಹಾ ನಮ್ಮ ಇಕ್ಕೇರಿ ನಾಯಕರಿಗೆ ಸಲ್ಲುತ್ತದೆ. ಇಂದು ಬಿದನೂರಿನ ಪೂರ್ವದಿಂದ ಉತ್ತರದ ಮುಖಾಂತರ ವಾಯುವ್ಯ ದಿಕ್ಕಿನಲ್ಲಿ ಹರಿಯುವ ಶರಾವತಿ ಮತ್ತು ಅದರ ಉಪನದಿಗಳಿಗೆ ಅಡ್ಡಲಾಗಿ ಕಟ್ಟಿಸಿದ ಹಲವಾರು ಸೇತುವೆಗಳು ಇಂದಿಗೂ ಸಹಾ ನಮ್ಮ ನಾಯಕರು ಹೊಂದಿದ ತಂತ್ರಜ್ಞಾನದ ಜೀವಂತ ಸಾಕ್ಷಿಯಾಗಿದೆ.

ಇಕ್ಕೇರಿ ಸಂಸ್ಥಾನದ ಕರಾವಳಿಯ ಕೆಲವು ನಿರ್ಧಿಷ್ಟ ಬಂದರಿನಲ್ಲಿ ತಯಾರಾಗುತ್ತಿದ್ದ ಹಡಗು ನಿರ್ಮಾಣದ ಬಗ್ಗೆ ರೋಚಕ ಮಾಹಿತಿಗಳು ಇಂದು ದೂರದ ವಿದೇಶಿ ಆರ್ಕೈವ್ ನಲ್ಲಿ ಸೆರೆ ಆಗಿದ್ದು, ಅದರಲ್ಲಿ ಇರುವ ಮಾಹಿತಿ ನಮ್ಮ ನಾಯಕರ ಬಗ್ಗೆ ಇದ್ದ ಪ್ರೀತಿ ಮತ್ತು ಅಭಿಮಾನ ಇಮ್ಮಡಿ ಗೊಳಿಸುತ್ತದೆ. ಹಡಗಿಗೆ ಬೇಕಾದ ಮರಗಳು, ಮರಗಳ ವಿಶಿಷ್ಟ ಲಕ್ಷಣಗಳು, ಅದರ ಗಾತ್ರ ಆಯಸ್ಸು ಹೀಗೆ ಹತ್ತು ಹಲವಾರು ಮಾಹಿತಿಗಳು ನಿಜಕ್ಕೂ ರೋಚಕ. ನಮ್ಮ ಮಲೆನಾಡಿನ ಕಾಳು ಮೆಣಸು ಏಲಕ್ಕಿಯ ಜೊತೆಗೆ ಹಡಗು ನಿರ್ಮಾಣಕ್ಕೆ ಬೇಕಾದ ಮರಗಳಿಗೆ ವಿದೇಶಿ ವ್ಯಾಪಾರಸ್ಥರಿಂದ ಬಹು ದೊಡ್ಡ ಬೇಡಿಕೆ ಇದ್ದಿದ್ದು ಇಂದು ಯಾರಿಗೂ ತಿಳಿದಿಲ್ಲದ ಸಂಗತಿ. ವಿಜಯನಗರದ ರಾಯರ ಕಾಲದಿಂದ ಇಕ್ಕೇರಿ ನಾಯಕರ ಕಾಲದ ವರೆಗೂ ಅರಬ್, ಫೋರ್ಚುಗೀಸ್, ಡಚ್ ಮತ್ತು ಆಂಗ್ಲರಿಗೆ ಹಡಗು ಕಟ್ಟಲು ಮರಗಳನ್ನು ಪೂರೈಸಿದ್ದು ನಮ್ಮ ಮಲೆನಾಡು. ಒಂದರ್ಥದಲ್ಲಿ ಇಡೀ ವಿಶ್ವಕ್ಕೆ ಒಂದು ಕಾಲದಲ್ಲಿ ಅನ್ನ, ಮಸಾಲೆ ಪದಾರ್ಥಗಳು ಮತ್ತು ಮರಗಳನ್ನು ಪೂರೈಸಿದ್ದು ನಮ್ಮ ಮಲೆನಾಡೇ ಹಾಗಾಗಿ ನಮ್ಮ ಋಣದಲ್ಲಿ ಬಹಳ ದೇಶಗಳು ಇರುವುದು ಇನ್ನೊಂದು ಅಂಶ.

ಆದರೆ ಇಂದು ನಮ್ಮ ರಾಜ್ಯದ ಗೆಜೆಟಿಯರ್ ಮತ್ತು ಇತರೆ ದಾಖಲಾತಿಗಳಲ್ಲಿ ಹಳೆಯ ಮೈಸೂರು ಪ್ರದೇಶದ ವೈಭವೀಕರಣ ಬಿಟ್ಟರೆ ಬೇರೇನೂ ಕಾಣಿಸುವುದಿಲ್ಲ. ಇಂದು ರಾಜ್ಯದಲ್ಲಿ ಅಸ್ತಿತ್ವದಲ್ಲಿ ಇರುವ ಹಳೆಯ ಆಣೆಕಟ್ಟು, ಸೇತುವೆ ಮತ್ತು ಕಾಲುಸಂಕಗಳು ನಮ್ಮಲ್ಲಿ ಜೀವಂತವಾಗಿ ಇದ್ದರೂ ಸಹಾ ಅದರ ಬಗ್ಗೆ ಎಲ್ಲೂ ಮಾಹಿತಿ ನೀಡದೇ ಇರುವುದು ಮಲೆನಾಡಿನ ಜನರಿಗೆ ಮಾಡಿದ ದೊಡ್ಡ ಅನ್ಯಾಯ. ಇಂದು ವಿದೇಶಿಯರು ಸಂಚರಿಸಿದ ಮತ್ತು ದಾಖಲಿಸಿದ ನಮ್ಮ ಮಲೆನಾಡಿನ ಹಳೆಯ ರಾಜಮಾರ್ಗಗಳು ಶರಾವತಿ ಹಿನ್ನೀರಿನಲ್ಲಿ ಮುಳುಗಿ ಹೋದರೆ ಅದರ ಜೊತೆಗೆ ನಮ್ಮ (ಮಲೆನಾಡಿಗರ) ಜೀವನ, ಪ್ರತಿಷ್ಠೆ ಮತ್ತು ಭವ್ಯ ಪರಂಪರೆ ಸಹಾ ಮುಳುಗಿರುವುದು ಬೇಸರದ ಸಂಗತಿ. ಇಂದು ಆ ರಾಜಮಾರ್ಗಗಳು ಮುಳುಗಿರುವ ಹಿನ್ನೀರಿನಲ್ಲಿ ಪಯಣಿಸುವಾಗ ನಮ್ಮ ಮಲೆನಾಡಿನ ಹಿಂದಿನ ವೈಭವ ಕಣ್ಣೆದರು ಬಂದಿದ್ದು ಮಾತ್ರ ಸತ್ಯ.
-ಲೇಖನ ಮತ್ತು ಫೋಟೋಗಳು
ಅಜಯ್ ಕುಮಾರ್ ಶರ್ಮಾ
ಇತಿಹಾಸ ಸಂಶೋಧಕ, ಅಧ್ಯಯನಕಾರ ಮತ್ತು ಪರಿಸರ ಹೋರಾಟಗಾರರು
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








