ದೇಶದ ಅನ್ನದಾತರ ಮೇಲೆ ಕೇಂದ್ರ ನಿರಂತರ ದೌರ್ಜನ್ಯ : ಮಲ್ಲಿಕಾರ್ಜುನ್ ಖರ್ಗೆ
ಬೆಂಗಳೂರು : ದೇಶದ ಅನ್ನದಾತರ ಮೇಲೆ ಉತ್ತರ ಪ್ರದೇಶ, ಹರಿಯಾಣ ರಾಜ್ಯ ಸರ್ಕಾರಗಳು, ಕೇಂದ್ರದ ಬಿಜೆಪಿ ಸರ್ಕಾರ ನಿರಂತರ ದೌರ್ಜನ್ಯ ನಡೆಸುತ್ತಿವೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಲಖಿಂಪುರದಲ್ಲಿ ರೈತರ ಮೇಲೆ ನಡೆದಿರುವ ದೌರ್ಜನ್ಯ ದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದೆ. ದೇಶದ ಅನ್ನದಾತರ ಮೇಲೆ ಉತ್ತರ ಪ್ರದೇಶ, ಹರಿಯಾಣ ರಾಜ್ಯ ಸರ್ಕಾರಗಳು, ಕೇಂದ್ರದ ಬಿಜೆಪಿ ಸರ್ಕಾರ ನಿರಂತರ ದೌರ್ಜನ್ಯ ನಡೆಸುತ್ತಿವೆ. ಕರಾಳ ಕಾಯ್ದೆಗಳನ್ನು ಹಿಂಪಡೆಯುವAತೆ ರೈತರು ಕಳೆದ 10 ತಿಂಗಳಿAದ ಚಳುವಳಿ ಮಾಡುತ್ತಿದ್ದಾರೆ. ಅವರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಕಾರು ಹರಿಸಿ ಹತ್ಯೆ ಮಾಡಿದ್ದಾರೆ. ಪ್ರತಿಭಟನಾನಿರತ ರೈತರಿಗೆ ಆತ ಪಾಠ ಕಲಿಸುವುದಾಗಿ ಎಚ್ಚರಿಸಿದ್ದನ್ನೂ ಮಾಧ್ಯಮಗಳಲ್ಲಿ ನೋಡಿದ್ದೇವೆ ಎಂದು ಕಿಡಿಕಾರಿದರು.
ಇನ್ನು ಅಜಯ್ ಮಿಶ್ರಾ ಅವರು, ರೈತರು ಬದಲಾಗದಿದ್ದರೆ ಕೇವಲ 2 ನಿಮಿಷದಲ್ಲಿ ಪಾಠ ಕಲಿಸುವುದಾಗಿ ಹೇಳಿದ್ದರು. ಈಗ ಅವರ ಪುತ್ರ ರೈತರ ಮೇಲೆ ಕಾರು ಹರಿಸಿ ನಾಲ್ವರು ರೈತರನ್ನು ಕೊಂದಿದ್ದಾನೆ. ಮೃತ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ ಪ್ರಿಯಾಂಕಾ ಗಾಂಧಿ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಲಾಗಿದೆ. 3 ಕರಾಳ ಕೃಷಿ ಕಾನೂನು ಮಾಡಿದ್ದು ಕೇಂದ್ರ ಸರ್ಕಾರ, ಆದರೀಗ ರಾಜ್ಯ ಸರ್ಕಾರಗಳಿಗೆ ಕುಮ್ಮಕ್ಕು ನೀಡಿ ರೈತರು ಪ್ರತಿಭಟನೆ ಮಾಡದಂತೆ, ಬೀದಿಗಿಳಿಯದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ದೂರಿದರು.
ಹೋರಾಟ ಮಾಡಿದರೆ ರೈತರಿಗೆ ಪಾಠ ಕಳಿಸುವುದಾಗಿ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಹರಿಯಾಣ ಸಿಎಂ ಖಟ್ಟರ್ ಅವರೂ ಹೇಳಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಸೇರಿ ಕಾಂಗ್ರೆಸ್ ನಾಯಕರನ್ನು ಯಾವುದೇ ವಾರೆಂಟ್ ಇಲ್ಲದೆ ಬಂಧಿಸಿರುವುದು ಕಾನೂನು ಬಾಹಿರ, ಅಸಾಂವಿಧಾನಿಕ. ಅಲ್ಲದೇ ಪ್ರಿಯಾಂಕಾ ಗಾಂಧಿ ಅವರನ್ನು ಅತಿಥಿ ಗೃಹದಲ್ಲಿ ಇರಿಸಲಾಗಿದೆ. ಇದು ಕೂಡ ಕಾನೂನು ಬಾಹಿರ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳೇ ಹೇಳಿದ್ದಾರೆ. ಮೋದಿಯವರು ಲಖನೌಗೆ ಆಗಮಿಸಿದ್ದರೂ ರೈತರ ಕುಟುಂಬಕ್ಕೆ ಸಾಂತ್ವನ ಹೇಳಲಿಲ್ಲ.
ಪ್ರಿಯಾಂಕಾ ಗಾಂಧಿ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದೇಕೆ ಎಂದು ಪ್ರಶ್ನಿಸಲಿಲ್ಲ. ತಮ್ಮನ್ನು ಕಾನೂನು ಬಾಹಿರವಾಗಿ ಬಂಧಿಸಿದ್ದಾರೆ, ಈ ಬಗ್ಗೆ ಗಮನಹರಿಸಿ ಎಂಬ ಪ್ರಿಯಾಂಕ ಗಾಂಧಿ ಅವರ ಮನವಿಗೂ ಅವರು ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.