ಬೆಂಗಳೂರು: ಫ್ರೆಂಚ್ ಫ್ರೈಸ್ (French Fries) ತಿನ್ನಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಪತ್ನಿಯು (Wife) ಪತಿಯ ವಿರುದ್ಧ ಕ್ರೌರ್ಯದ ಪ್ರಕರಣ ದಾಖಲಿಸಿದ್ದು, ಪತಿಗೆ (Husband) ಕರ್ನಾಟಕ ಹೈಕೋರ್ಟ್ (Karnataka High Court) ತಾತ್ಕಾಲಿಕ ರಿಲೀಫ್ ನೀಡಿದೆ.
ಪತ್ನಿ ಆರೋಪಿಸಿರುವ ಆರೋಪಗಳು ಕ್ಷುಲ್ಲಕವಾಗಿವೆ ಎಂದು ಅಭಿಪ್ರಾಯಪಟ್ಟ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ತನಿಖೆಗೆ ತಡೆ ನೀಡಿ ಉದ್ಯೋಗ ಕುರಿತಂತೆ ಪತಿಗೆ ಅಮೆರಿಕಕ್ಕೆ ತೆರಳಲು ಅನುಮತಿ ನೀಡಿದೆ.
ವಕೀಲ ಶಾಂತಿ ಭೂಷಣ್ ಹೆಚ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಪತಿ ತನ್ನ ವಿರುದ್ಧದ ದೂರು ಕ್ಷುಲ್ಲಕವಾಗಿದೆ ಎಂದು ಆರೋಪಿಸಿದ್ದರು. ಕಕ್ಷಿದಾರರಿಗೆ ಅಮೆರಿಕದಲ್ಲಿ (USA) ಉದ್ಯೋಗವಿದೆ. ಆದರೆ ಆದರೆ ನ್ಯಾಯವ್ಯಾಪ್ತಿಯ ನ್ಯಾಯಾಲಯವು ಪತ್ನಿಯ ದೂರಿನ ನಂತರ ಲುಕ್ ಔಟ್ ಸುತ್ತೋಲೆ (LOC) ಹೊರಡಿಸಿದ್ದರಿಂದ ಅಮೆರಿಕಕ್ಕೆ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಪತಿ ಪ್ರಕರಣ ತೆರವು ಮಾಡುವಂತೆ ಮನವಿ ಮಾಡಿದ್ದರು.
ಎರಡನೇ ಮಗುವಿಗೆ ಜನ್ಮ ನೀಡಿದ ನಂತರ ಫ್ರೆಂಚ್ ಫ್ರೈಸ್, ಅಕ್ಕಿ ಮತ್ತು ಮಾಂಸವನ್ನು ತಿನ್ನಲು ಪತಿ ನಿರಾಕರಿಸಿದ್ದಾರೆ ಎಂದು ಆರೋಪಿಸಿ ಪತ್ನಿ ಕ್ರೌರ್ಯದ ಅಡಿ ಪತಿ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲದೇ, ಮಗು ಹುಟ್ಟುವುದಕ್ಕೂ ಮೊದಲು 6 ವರ್ಷ ನಾವು ಅಮೆರಿಕದಲ್ಲಿ ವಾಸಿಸುತ್ತಿದ್ದೇವು. ಮನೆಯ ಎಲ್ಲಾ ಕೆಲಸವನ್ನು ನಾನೇ ಮಾಡುತ್ತಿದ್ದೆ. ಆಕೆ ಫೋನ್ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಳು. ಈ ವೇಳೆ ಪಾಕಿಸ್ತಾನಿ ನಾಟಕ ಹೆಚ್ಚು ವೀಕ್ಷಿಸುತ್ತಿದ್ದಳು. ಬಾತ್ ರೂಂ ಸ್ವಚ್ಛ ಮಾಡುವಂತೆ ಮತ್ತು ಪಾತ್ರೆ ತೊಳೆಯುವಂತೆ ನನಗೆ ಸೂಚಿಸುತ್ತಿದ್ದಳು ಎಂದು ಪತಿ ನ್ಯಾಯಾಲಯಕ್ಕೆ ಹೇಳಿದ್ದರು.
ನಂತರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಇದು ಕಾನೂನಿನ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದೆ ಮತ್ತು ಪ್ರಕರಣದಲ್ಲಿ ಎಲ್ಒಸಿಯನ್ನು ಅಸ್ತ್ರವಾಗಿ ಬಳಸಲಾಗಿದೆ ಎಂದು ಅಭಿಪ್ರಾಯ ಪಟ್ಟು, ಪತಿಯ ವಿರುದ್ಧದ ತನಿಖೆಗೆ ಮಧ್ಯಂತರ ತಡೆ ನೀಡಿದೆ.