ಅಮರಾವತಿ: ಮಾಸ್ಕ್ ಹಾಕಿಕೊಳ್ಳಪ್ಪಾ, ಕೊರೊನಾ ಹರಡುತ್ತದೆ ಎಂದು ಹೇಳಿದ್ದಕ್ಕೆ ಕೋಪಗೊಂಡ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬ ಮಹಿಳಾ ಸಹೋದ್ಯೋಗಿ ಕೂದಲು ಹಿಡಿದುಕೊಂಡು ಎಳೆದಾಡಿದಲ್ಲದೆ ರಾಡ್‍ನಿಂದ ಹಲ್ಲೆ ಮಾಡಿದ್ದಾನೆ. ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಹೋಟೆಲ್ ಕಚೇರಿಯಲ್ಲಿ.
ಮಾಸ್ಕ್ ಹಾಕೊಳ್ಳಪ್ಪಾ ಎಂದಿದ್ದೇ ತಪ್ಪಾಯ್ತು..!
ಹೌದು, ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಹೋಟೆಲ್ ಕಚೇರಿಯ ಡೆಪ್ಯುಟಿ ಮ್ಯಾನೇಜರ್ ಭಾಸ್ಕರ್ ಎಂಬಾತ ಮಾಸ್ಕ್ ಹಾಕದೇ ಕಚೇರಿಗೆ ಬಂದಿದ್ದ. ಇದನ್ನು ಕಂಡ ಮಹಿಳಾ ಸಿಬ್ಬಂದಿಯೊಬ್ಬರು ಮಾಸ್ಕ್ ಹಾಕಿಕೊಳ್ಳಿ, ಕೊರೊನಾ ಹರಡುತ್ತದೆ ಎಂದು ಸಲಹೆ ನೀಡಿದ್ದಾರೆ. ಇದರಿಂದ ಕೋಪಗೊಂಡ ಭಾಸ್ಕರ್, ತನ್ನ ಮಹಿಳಾ ಸಹೋದ್ಯೋಗಿಯ ಜಡೆ ಹಿಡಿದುಕೊಂಡು ನೆಲಕ್ಕೆ ತಳ್ಳಿದ್ದಾನೆ. ಅಷ್ಟೇ ಅಲ್ಲದೆ ಅಲ್ಲೇ ಇದ್ದ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿದ್ದಾನೆ. ಈ ಹಲ್ಲೆಯ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಲ್ಲೆ ನಂತರ ಮಹಿಳಾ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ಭಾಸ್ಕರ್ ವಿರುದ್ಧ ದೂರು ನೀಡಿದ್ದಾರೆ. ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ಭಾಸ್ಕರ್‍ನನ್ನು ವಶಕ್ಕೆ ಪಡೆದಿದ್ದಾರೆ.