ಬೆಂಗಳೂರು : ಪ್ರಕೃತಿಯೊಂದಿಗೆ ಸಮನ್ವಯ ಸಾಧಿಸಿಕೊಂಡು ಅಭಿವೃದ್ಧಿ ಯೋಜನೆಗಳನ್ನು ಮಾಡದೆ ಮನುಷ್ಯ ಪ್ರಕೃತಿಯನ್ನು ನಿರ್ಲಕ್ಷಿಸಿ, ಅಭಿವೃದ್ಧಿ ಹೊಂದುತ್ತಿರುವುದಕ್ಕೆ ಇಂದು ಪ್ರಪಂಚವೇ ಈ ಒಂದು ಪ್ರಾಕೃತಿಕ ಬಿಕ್ಕಟ್ಟನ್ನು ಅನುಭವಿಸುವಂತಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ, ಪ್ರೊ.ಕೆ ಆರ್ ವೇಣುಗೋಪಾಲ್ ಅವರು ವಿಷಾದಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗವು, ವಿಶ್ವ ಪರಿಸರದ ಅಂಗವಾಗಿ ಆಯೋಜಿಸಿದ್ದ ಪರಿಸರ ಮತ್ತು ಜೀವಸಂಕುಲದ ಮೇಲೆ ಹವಾಮಾನದ ಬದಲಾವಣೆಯ ಪರಿಣಾಮ ಕುರಿತಾದ 6ದಿನಗಳ, ಅಂತರ್ರಾಷ್ಟ್ರೀಯ ಆನ್ಲೈನ್ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು ಅವರು, ಪರಿಸರ ಸಂರಕ್ಷಣೆ ಪ್ರತಿಯೋರ್ವ ಜೀವಿಯ ಜವಾಬ್ದಾರಿಯಾಗಿದೆ. ಹಾಗೂ ಪಂಚ ತತ್ವಗಳಾದ ಭೂಮಿ ನೀರು ಗಾಳಿ ಬೆಂಕಿ ಆಕಾಶವನ್ನು ಮಾಲಿನ್ಯ ಗೊಳಿಸಿದರ ಫಲವಾಗಿ ಜೀವಜಗತ್ತು ಇಂದು ಅನೇಕ ಪ್ರಾಕೃತಿಕ ವಿಕೋಪಗಳಿಗೆ ಸಾಕ್ಷಿಯಾಗಿದೆ. ಇನ್ನಾದರೂ ಮನುಷ್ಯ ಪ್ರಕೃತಿಯೊಂದಿಗೆ ಜೀವಿಸುವುದನ್ನು ಕಲಿಯಬೇಕೆಂದು ಅರ್ಥೈಸಿದರು.
ವಿಚಾರಸಂಕಿರಣದ ಸಂಯೋಜಕಿ ಪ್ರೊ.ಎನ್. ನಂದಿನಿ ಮಾತನಾಡಿ, ಕೋವಿಡ್ -19ರ ಪರಿಣಾಮವಾಗಿ, ಇಡೀ ಜಗತ್ತೇ ಲಾಕ್ಡೌನ್ ಆಗಿದೆ. ಹಾಗೂ ಇದರಿಂದ ವಾಹನ, ಕಾರ್ಖಾನೆ ಮತ್ತಿತರೆ ಚಟುವಟಿಕೆಗಳು ಕುಂಠಿತವಾಗಿ ಪ್ರಕೃತಿ ಮೇಲಿನ ಮಾಲಿನ್ಯ ಕಡಿಮೆಯಾಗಿದೆ ಮತ್ತು ಇದರಿಂದ ಪ್ರಕೃತಿ ಹೊಸ ಹುಟ್ಟನ್ನು ಪಡೆದಿದೆ ಎಂದು ಹೇಳಿದರು. ಕಳೆದ 25 ವರ್ಷಗಳಲ್ಲಿ ನಮ್ಮ ವಿಭಾಗವು ಪರಿಸರ ಮತ್ತು ಜೀವ ಸಂಕುಲದ ಕುರಿತಾಗಿ ಸಾಕಷ್ಟು ಸಂಶೋಧನೆಗಳನ್ನು ಮಾಡುವ ಮೂಲಕ ಪರಿಸರ ವಿಜ್ಞಾನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.
ವಿಚಾರ ಸಂಕಿರಣವು, ಪ್ರತಿದಿನ ಬೆಳಗ್ಗೆ 10-30ರಿಂದ 12ವರೆಗೂ ರೂಮ್ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ನಡೆಯಲಿದೆ, ಕೊನೆಯ ದಿನ ಅಂದರೆ 11ಜೂನ್ ವಿಚಾರಸಂಕಿರಣದ ವಿಷಯವಾಗಿ ಆನ್ಲೈನ್ ಕ್ವಿಜ್ ಆಯೋಜಿಸಲಾಗಿದೆ. ಉತ್ತೀರ್ಣರಾದವರಿಗೆ ಇ,-ಸರ್ಟಿಫಿಕೇಟನ್ನು ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ವಿಚಾರ ಸಂಕೀರ್ಣದ ಸಂಘಟಕ ಡಾ. ಬಿ.ಸಿ. ನಾಗರಾಜ್, ಡಾ.ಕೆ.ಎಲ್. ಪ್ರಕಾಶ್ ಮತ್ತು ವಿಶ್ವವಿದ್ಯಾಲಯದ ಇತರ ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.








