ಸೆಲ್ಫಿ ತೆಗೆದುಕೊಳ್ಳುವಾಗ ಬಂಡೆಯಿಂದ ಜಾರಿ ಬಿದ್ದ ವ್ಯಕ್ತಿ, 8 ದಿನಗಳ ಬಳಿಕ ಶವವಾಗಿ ಪತ್ತೆ.
ಸೆಲ್ಪಿ ತೆಗೆದುಕೊಳ್ಳುವಾಗ ಬೆಟ್ಟದಿಂದ ಕಾಲುಜಾರಿ ಬಿದ್ದ ಯುವಕ ಎಂಟು ದಿನಗಳ ನಂತರ ಕೊಳೆತ ಶವವಾಗಿ ಪತ್ತೆಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಫೆಬ್ರವರಿ 2 ರಂದು 32 ವರ್ಷದ ರಾಮ್ ಕುಮಾರ್ ಎಂಬ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಕೊಡೈಕೆನಾಲ್ಗೆ ಭೇಟಿ ನೀಡಿದ್ದರು. ಈ ಸ್ನೇಹಿತರು ರೆಡ್ ರಾಕ್ ಬಂಡೆಯ ಸ್ಥಳವನ್ನ ಪ್ರವೇಶಿಸಿತ್ತು, ಇದು ಅತ್ಯಂತ ಅಪಾಯಕಾರಿ ಸ್ಥಳವಾಗಿರುವುದರಿಂದ ಅಧಿಕಾರಿಗಳು ವರಿಗೆ ಅನುಮತಿ ನೀಡಿರಲಿಲ್ಲ.
ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿದ ನಂತರ ರಾಮ್ಕುಮಾರ್ ಬಂಡೆಯ ಮೇಲಿನಿಂದ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವಾಗ ಜಾರಿ ಬಿದ್ದು ಕಾಣೆಯಾಗಿದ್ದಾನೆ ಎಂದು ಸ್ನೇಹಿತರು ತಿಳಿಸಿದ್ದಾರೆ.ಅರಣ್ಯಾಧಿಕಾರಿಗಳು, ಪೊಲೀಸರು, ಪರ್ವತಾರೋಹಣ ಸಿಬ್ಬಂದಿಯೊಂದಿಗೆ ಆರು ದಿನಗಳ ಕಾಲ ಈ ಪ್ರದೇಶದಲ್ಲಿ ಶೋಧ ಕಾರ್ಯವನ್ನು ನಡೆಸಿದ್ದಾರೆ. ಅತ್ಯಂತ ಒರಟಾದ ಭೂಪ್ರದೇಶದ ಕಾರಣ ರಾಮ್ಕುಮಾರ್ ಅವರನ್ನು ಹುಡುಕಲು ಸಾಧ್ಯವಾಗಲಿಲ್ಲ.
30 ಜನರನ್ನು ಒಳಗೊಂಡ ಶೋಧ ತಂಡವು ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಡ್ರೋನ್ಗಳನ್ನು ಬಳಸಿ ಅಂತಿಮವಾಗಿ, ಎರಡು ದಿನಗಳ ಹಿಂದೆ ರೆಡ್ ರಾಕ್ ಬಂಡೆಯ ಸುಮಾರು 1,400 ಅಡಿಗಳಷ್ಟು ಕೆಳಗೆ ರಾಮ್ ಕುಮಾರ್ ಧರಿಸಿದ್ದ ಬಟ್ಟೆಯ ತುಂಡು ಪತ್ತೆಯಾಗಿದೆ.
ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ದುರದೃಷ್ಟವಶಾತ್ ರಾಮ್ಕುಮಾರ್ ಅವರ ಕೊಳೆತ ಶವವು ಬಿರುಕುಗಳ ನಡುವೆ ಕಂಡುಬಂದಿದೆ. ಬಹಳ ಕಷ್ಟಪಟ್ಟು ಸಿಬ್ಬಂದಿ ರಾಮಕುಮಾರ್ ಅವರ ದೇಹವನ್ನು ಹೊರತೆಗೆದು ಪ್ಲಾಸ್ಟಿಕ್ ಹಾಳೆಯಲ್ಲಿ ಸುತ್ತಿದರು. ಕತ್ತಲಾದ ಕಾರಣ, ಸಿಬ್ಬಂದಿ ಸ್ಥಳದಿಂದ ಹೊರಟು ಮರುದಿನ ಹಿಂತಿರುಗಬೇಕಾಯಿತು.
ಒಂದು ತಂಡವು ದೇಹವನ್ನು ಸಿದ್ಧಪಡಿಸುತ್ತಿದ್ದಂತೆ, ಇನ್ನೊಂದು ತಂಡವು ದೇಹವನ್ನು ಸುಮಾರು 1000 ಅಡಿಗಳಷ್ಟು ರೆಡ್ ರಾಕ್ ಬಂಡೆಯ ಮೇಲೆ ಎಳೆಯಬೇಕಾಯಿತು. ನಂತರ ರಾಮ್ಕುಮಾರ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಡೈಕೆನಾಲ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಮತ್ತು ಪೊಲೀಸರು ತನಿಖೆಯ ಭಾಗವಾಗಿ ಅವರ ಸ್ನೇಹಿತರನ್ನು ಸಹ ವಿಚಾರಣೆ ನಡೆಸುತ್ತಿದ್ದಾರೆ.








