ಐಪಿಎಲ್ ತಂಡವನ್ನು ಖರೀದಿಸಲಿದೆ ಫುಟ್ ಬಾಲ್ ಕ್ಲಬ್
14 ನೇ ಆವೃತ್ತಿಯ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಬಿಸಿಸಿಐ 15ನೇ ಆವೃತ್ತಿಗೆ ಬ್ಲೂ ಪ್ರಿಂಟ್ ರೆಡಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಮುಂದಿನ ಬಾರಿಯ ಐಪಿಎಲ್ ನಲ್ಲಿ ಹೊಸ ತಂಡಗಳ ಸೇರ್ಪಡೆಯಾಗಲಿದೆ. ಇದು ಐಪಿಎಲ್ ಕ್ರೇಜ್ ಇನ್ನಷ್ಟು ಹೆಚ್ಚಿಸಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.
ಆದ್ರೆ ಈವರೆಗೂ ಆ ಹೊಸ ತಂಡಗಳು ಯಾವುವು..? ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಈ ಮಧ್ಯೆ ವಿಶ್ವದ ಅತ್ಯಂತ ಜನಪ್ರಿಯ ಫುಟ್ ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಐಪಿಎಲ್ ತಂಡವನ್ನು ಖರೀದಿಸಲಿದೆ ಎಂದು ವರದಿಯಾಗಿದೆ.
ಹೌದು..! ಐಪಿಎಲ್ ಬಂಗಾರದ ಮೊಟ್ಟೆ ಇರುವ ಕೋಳಿ. ಇಲ್ಲಿ ನೇಮು ಫೇಮು ಎಲ್ಲವೂ ಸಿಗುತ್ತದೆ. ಜೊತೆಗೆ ಲಕ್ಷ್ಮಿದೇವಿಯ ಆಗಮನವೂ ಆಗುತ್ತದೆ. ಹೀಗಾಗಿಯೇ ಬಿಸಿಸಿಐ ಐಪಿಎಲ್ ಗೆ ಪ್ರತ್ಯೇಕ ಸ್ಥಾನವನ್ನು ನೀಡಿದೆ. ದೇಶಿ ಟೂರ್ನಿಗಳ ಪೈಕಿ ಐಪಿಎಲ್ ಬಿಸಿಸಿಐ ಪ್ರತ್ಯೇಕವಾದ ಪೀಠವನ್ನಾಕಿದೆ.
ಇನ್ನು ಮುಂದಿನ ಬಾರಿ ಐಪಿಎಲ್ ನಲ್ಲಿ ಎರಡು ಹೊಸ ತಂಡಗಳು ಭಾಗಿಯಾಗಲಿದ್ದು, ತಂಡಗಳ ಹರಾಜಿಗಾಗಿ ಬಿಸಿಸಿಐ ಒಂದು ತಂಡದ ಬೆಲೆ 2 ಸಾವಿರ ರೂ. ಕೋಟಿ ನಿಗದಿ ಮಾಡಿದೆ. ಈ ಎರಡು ತಂಡಗಳ ಹರಾಜಿನ ಮೂಲಕ ಬರೋಬ್ಬರಿ ಐದು ಸಾವಿರ ಕೋಟಿ ಆದಾಯಗಳಿಸೋದು ಬಿಸಿಸಿಐನ ಪ್ಲಾನ್ ಆಗಿದೆ.
ಇದೇ ತಿಂಗಳಿನಲ್ಲಿ ಹೊಸ ತಂಡಗಳ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಹರಾಜಿನಲ್ಲಿ ಫುಟ್ ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ಭಾಗಿಯಾಗಲಿದೆಯಂತೆ. ಮ್ಯಾಂಚೆಸ್ಟರ್ ಯುನೈಟೆಡ್ ಮಾಲೀಕರಾದ ಗ್ಲೇಜರ್ ಕುಟುಂಬವು ಐಪಿಎಲ್ ಹೊಸ ಫ್ರಾಚೈಸಿ ಪಡೆಯಲು ಆಸಕ್ತಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.