ಲಾರಿ ಡಿಕ್ಕಿ ಹೊಡೆದು ಮೂರು ಎತ್ತುಗಳ ಸಾವು – 3 ರೈತರಿಗೆ ಗಾಯ..
ಎತ್ತಿನ ಗಾಡಿಗೆ ಮಿನಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂರು ಎತ್ತುಗಳು ಮೃತಪಟ್ಟಿದ್ದು ಒಂದು ಎತ್ತಿನ ಸ್ಥಿತಿ ಚಿಂತಾಜನಕವಾಗಿದೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ನೀಲನಹಳ್ಳಿ ಗೇಟ್ ಸಮೀಪ ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಅಪಘಾತದಲ್ಲಿ ಮೂವರು ರೈತರಿಗೆ ಗಾಯಗಳಾಗಿದ್ದು ಮೈಸೂರಿನ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತವಾದ ಸ್ಥಳಕ್ಕೆ ಶಾಸಕ ಸಿ.ಎಸ್.ಪುಟ್ಟರಾಜು, ಬಿಜೆಪಿ ಯುವ ನಾಯಕ ಡಾಕ್ಟರ್ ಎನ್.ಎಸ್.ಇಂದ್ರೇಶ್, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ರೈತಸಂಘದ ಪಾಂಡವಪುರ ಅಧ್ಯಕ್ಷ ಚಿಕ್ಕಾಡೆ ಹರೀಶ್ ಭೇಟಿ ನೀಡಿ, ಎತ್ತುಗಳ ಸಾವಿಗೆ ಬೇಸರ ವ್ಯಕ್ತಪಡಿಸಿದರು.
ಶಾಸಕ ಸಿ.ಎಸ್.ಪುಟ್ಟರಾಜು ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ, ಪರಿಹಾರ ನೀಡುವ ಕುರಿತು ಸೂಚಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಡಾ.ಇಂದ್ರೇಶ್ ಅವರು, ನೊಂದ ರೈತ ಕುಟುಂಬಕ್ಕೆ ಸ್ಥಳದಲ್ಲೇ ಆರ್ಥಿಕ ಸಹಾಯ ಮಾಡಿದರು.








