Mandya | ಲಾರಿ – ಕಾರು ಡಿಕ್ಕಿ | ಮೂವರು ಸಾವು
ಮಂಡ್ಯ : ಲಾರಿ ಮತ್ತು ಕಾರು ಮುಖಾಮುಖಿಯಾಗಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿ ಮೃತಪಟ್ಟು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಾಗಮಂಗಲ ಹೊರವಲಯ ಚಾಮರಾಜನಗರ-ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಎಂ.ಹೊಸೂರು ಗೇಟ್ ಸಮೀಪ ಶನಿವಾರ ರಾತ್ರಿ ನಡೆದಿದೆ.
ನಾಗಮಂಗಲ ತಾಲೂಕಿನ ಬಿರೇಶ್ವರಪುರದ ದೇವರಾಜು, ಪಾಂಡವಪುರ ತಾಲೂಕಿನ ವದೆಸಮುದ್ರ ಗ್ರಾಮದ ಮಂಜುನಾಥ್ ಮೃತರಾಗಿದ್ದು, ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ.

ಇನ್ನು ಘಟನೆಯಲ್ಲಿ ಪಾಂಡವಪುರ ತಾಲೂಕಿನ ಎಲೆಕೆರೆ ಗ್ರಾಮದ ಸ್ವಾಮಿ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೈಸೂರಿನಿಂದ ಬೆಳಗಾವಿಗೆ ಸಂಚರಿಸುತ್ತಿದ್ದ ವೇಳೆ ಕಾರು ಲಾರಿಗೆ ಡಿಕ್ಕಿಯಾಗಿದ್ದು, ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.
ನಾಗಮಂಗಲ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಮೃತ ದೇಹಗಳನ್ನು ರವಾನಿಸಲಾಗಿದೆ.
ಇನ್ನು ಈ ಸಂಬಂಧ ನಾಗಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








