ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಕೊರೋನಾ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು, ಆತನನ್ನು ಕೊರೋನಾ ಶಂಕೆಯ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಆಸ್ಪತ್ರೆಯಿಂದ ಪರಾರಿಯಾಗಿದ್ದು, ಕರಾವಳಿ ಜನರಲ್ಲಿ ಆತಂಕ ಮೂಡಿಸಿದೆ.
ದುಬೈನಿಂದ ಭಾನುವಾರ ತಡರಾತ್ರಿ ಮಂಗಳೂರಿನ ಏರ್ ಪೋರ್ಟಿಗೆ ಆಗಮಿಸಿದ ವ್ಯಕ್ತಿ ಜ್ವರದಿಂದ ಬಳಲುತ್ತಿದ್ದದ್ದು ಸ್ಕ್ರೀನಿಂಗ್ ವೇಳೆ ಗೊತ್ತಾಗಿತ್ತು. ಕೂಡಲೇ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿ, ಆತನ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ರವಾನಿಸಿದ್ದು, ಕೊರೋನಾ ಇರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಆತನನ್ನು ಐಸೋಲೇಶನ್ ವಾರ್ಡ್ ಗೆ ಸಿಬ್ಬಂದಿ ರವಾನಿಸಿದ್ದರು. ಆದರೆ ಆತ ರಾತ್ರೋರಾತ್ರಿ ಆಸ್ಪತ್ರೆಯಿಂದ ಪರಾರಿ ಆಗಿದ್ದು, ಕರಾವಳಿ ಮಂದಿಯಲ್ಲಿ ಆತಂಕ ಹುಟ್ಟಿಸಿದೆ. ಈ ಸಂಬಂಧ ಆರೋಗ್ಯಾಧಿಕಾರಿ ಕೂಡಲೇ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಕರೆ ಮಾಡಿ ದೂರು ನೀಡಿದ್ದಾರೆ.
ರಾತ್ರಿ ವ್ಯಕ್ತಿಯನ್ನು ಕಳುಹಿಸಿಕೊಡುವಂತೆ ಸಂಬಂಧಿಕರು ಗಲಾಟೆ ಮಾಡಿದ್ದರು ಮಾತ್ರವಲ್ಲದೆ ತಾವು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ತಿಳಿಸಿದ್ದರು.








