ಮಾಜಿ ಶಾಸಕ ಮೊಯಿದ್ದೀನ್ ಬಾವಾ ಮನೆ ಸೀಲ್ ಡೌನ್
ಮಂಗಳೂರು, ಜೂನ್ 27: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರ ಮಂಗಳೂರಿನಲ್ಲಿರುವ ಮನೆಯನ್ನು ಶುಕ್ರವಾರ ಸೀಲ್ ಡೌನ್ ಮಾಡಲಾಗಿದೆ.
ಬೆಂಗಳೂರಿನಲ್ಲಿರುವ ಮೊಯಿದ್ದೀನ್ ಬಾವಾ ಅವರ ಪುತ್ರನಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಸುರತ್ಕಲ್ ಸಮೀಪದ ಚೊಕ್ಕಬೆಟ್ಟುವಿನಲ್ಲಿರುವ ಇವರ ನಿವಾಸವನ್ನು ಶುಕ್ರವಾರ ಸೀಲ್ ಡೌನ್ ಮಾಡಿದೆ ಎಂದು ತಿಳಿದುಬಂದಿದೆ.
ಪುತ್ರನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ಮೊಯಿದ್ದೀನ್ ಬಾವಾ ಹಾಗೂ ಅವರ ಪತ್ನಿಯ ಗಂಟಲು ದ್ರವದ ಮಾದರಿಗಳನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು ಇವರಿಬ್ಬರ ವರದಿಯೂ ನೆಗೆಟಿವ್ ಬಂದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇಲ್ಲಿ ಯಾವುದೇ ಆತಂಕ ಇಲ್ಲ ಎಂದು ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ತಿಳಿಸಿದ್ದು, ಮುಂಜಾಗ್ರತಾ ಕ್ರಮವಾಗಿ
ಮಂಗಳೂರಿನಲ್ಲಿರುವ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ. ಅವರ ಪುತ್ರ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.