ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಮೊದಲ ಬಲಿಯಾಗಿದೆ. ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ಉಸಿರಾಟದ ತೊಂದರೆಯಿಂದ ಶನಿವಾರ ದಾಖಲಾಗಿದ್ದ ಮಹಿಳೆ ಇಂದು ಬೆಳಿಗ್ಗೆ ಸಾವನ್ನಪ್ಪಿದ್ದು, ಆಕೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬಂಟ್ವಾಳ ಮೂಲದ 45 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಬಂಟ್ವಾಳ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಕೊರೊನಾ ರೋಗದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿಂದ ಅವರನ್ನು ವೆನ್ಲಾಕ್ ನಲ್ಲಿರುವ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಮಹಿಳೆ ತೀವ್ರ ಉಸಿರಾಟದ ತೊಂದರೆಯಿಂದ ಭಾನುವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ. ಶನಿವಾರ ಕೊರೊನಾ ಪರೀಕ್ಷೆಗೆ ಕಳುಹಿಸಿದ್ದ ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಇದೀಗ ಬಂದಿದ್ದು ಆಕೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮೃತ ಮಹಿಳೆಯ ಮಗ ಮಾರ್ಚ್ 16 ರಂದು ದುಬೈನಿಂದ ಬಂದಿದ್ದು, ಆತನಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗುತ್ತಿದೆ. ಮೃತಳ ಪತಿ ಮತ್ತು ಮಗನನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಮೃತಳ ಅತ್ತೆಯ ಸ್ಥಿತಿ ಗಂಭೀರವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಮೂವರ ಗಂಟಲು ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಮಹಿಳೆ ಮೃತಪಟ್ಟ ಹಿನ್ನೆಲೆಯಲ್ಲಿ ಬಂಟ್ವಾಳ ಕೆಳಗಿನ ಪೇಟೆ ಸೀಲ್ಡೌನ್ ಮಾಡಲಾಗಿದ್ದು, ಮನೆಯಿಂದ ಯಾರೂ ಹೊರಬರಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಮೊದಲ ಬಲಿಯಾಗುವುದರ ಜೊತೆ ಕರ್ನಾಟಕದಲ್ಲಿ ಕೊರೊನಾಗೆ ಮೃತ ಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ