ಮಂಗಳೂರು ಶಾಲೆಗಳಿಗೆ ಹೆಚ್ಚುವರಿಯಾಗಿ 4 ದಿನ ರಜೆ ಘೋಷಣೆ
ಮಂಗಳೂರು ತಾಲೂಕಿನ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ. ಸರ್ಕಾರಿ ದಸರಾ ರಜೆಯ ಜೊತೆಗೆ ಮಂಗಳೂರು ದಸರಾ ಹಿನ್ನಲೆಯಲ್ಲಿ ತಾಲೂಕು ವ್ಯಾಪ್ತಿಯಲ್ಲಿನ ಶಾಲೆಗಳಿಗೆ 4 ದಿನಗಳ ಕಾಲ ಹೆಚ್ಚುವರಿ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶಿಸಿದ್ದಾರೆ.
ಸೆ.28ರಿಂದ ಅಕ್ಟೋಬರ್ 1ರವರೆಗೆ ಹೆಚ್ಚುವರಿ 4 ದಿನಗಳ ರಜೆ ನೀಡಲಾಗಿದೆ. ಈಗಾಗಲೇ ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಟೋಬರ್ 3ರಿಂದ 16ರವರೆಗೆ ದಸರಾ ರಜೆ ಘೋಷಿಸಲಾಗಿತ್ತು. ಆದರೆ ಸೆ.26ರಿಂದ ಆರಂಭಗೊಳ್ಳುವ ಮಂಗಳೂರು ದಸರಾ ಹಬ್ಬಕ್ಕೆ ಪೂರಕವಾಗುವಂತೆ ಸೆ.26ರಿಂದಲೇ ರಜೆ ನೀಡುವಂತೆ ಪೋಷಕರು, ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರು ಹೆಚ್ಚುವರಿ ರಜೆ ನೀಡಲು ಸೂಚಿಸಿದ್ದರು.ಈ ಸೂಚನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಮಂಗಳೂರು ತಾಲೂಕು ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೆ.28ರಿಂದ ಅಕ್ಟೋಬರ್ 1ರವರೆಗೆ ಹೆಚ್ಚುವರಿ ರಜೆಗಳನ್ನು ಘೋಷಿಸಿದ್ದಾರೆ.
ಅಕ್ಟೋಬರ್ 2ರ ಭಾನುವಾರ ಕಡ್ಡಾಯವಾಗಿ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸುವಂತೆ ಸೂಚಿಸಲಾಗಿದೆ. ಹೆಚ್ಚುವರಿಯಾಗಿ ನೀಡಿರುವ ನಾಲ್ಕು ದಿನಗಳ ರಜೆಯನ್ನು ನವೆಂಬರ್ ತಿಂಗಳಲ್ಲಿ ನಾಲ್ಕು ಶನಿವಾರ ಪೂರ್ಣ ದಿನದ ತರಗತಿಗಳನ್ನು ಹಾಗೂ ಎರಡು ಭಾನುವಾರ ಪೂರ್ಣ ಶಾಲಾ ಕೆಲಸದ ದಿನಗಳಾಗಿ ನಡೆಸಿ ಸರಿದೂಗಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.








