ರಾಮನಗರ: ಇಲ್ಲಿಯ ಯಾರಬ್ ನಗರದಲ್ಲಿನ ದರ್ಗಾದಲ್ಲಿ ಪ್ರಸಾದ ಸೇವಿಸಿದ್ದ ಹಲವರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.
ಯಾರಬ್ ದರ್ಗಾದಲ್ಲಿ ಪ್ರಸಾದ ತಿಂದ 50ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎನ್ನಲಾಗಿದ್ದು, ಪೀರನ್ ಷಾ ವಲಿ ದರ್ಗಾ ಉರುಸ್ ಪ್ರಯುಕ್ತ ಪ್ರಸಾದ ವಿತರಿಸಲಾಗಿತ್ತು. ಈ ಪ್ರಸಾದ ಸ್ವೀಕರಿಸಿದ 50ಕ್ಕೂ ಅಧಿಕ ಜನರಿಗೆ ವಾಂತಿ- ಭೇದಿ ಶುರುವಾಗಿದ್ದು, ಅವರೆಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದರ್ಗಾದಲ್ಲಿ ಮಲಿದಾ ಎಂಬ ಸಿಹಿ ಪದಾರ್ಥ ವಿತರಿಸಲಾಗಿತ್ತು. ಇದನ್ನು ಸೇವಿಸಿದ ನಂತರ ವಾಂತಿ, ಭೇದಿ ಶುರುವಾಗಿದೆ. ಹೀಗಾಗಿ ಸಿಹಿ ತಿಂಡಿಯಲ್ಲಿ ವಿಷಕಾರಿ ಅಂಶ ಇರುವ ಬಗ್ಗೆ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೆಲವರು ಹೆಚ್ಚು ನಿತ್ರಾಣಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಲಿದಾ ಸಿಹಿ ತಿಂಡಿಯ ಮಾದರಿಯನ್ನು ಪರೀಕ್ಷೆಗಾಗಿ ಪಡೆದಿದ್ದಾರೆ. ಸ್ಥಳಕ್ಕೆ ಸ್ಥಳೀಯ ಶಾಸಕರು ಭೇಟಿ ನೀಡಿ, ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.