ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ಸ್ ದಂಧೆ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಸಿಡಿಸಿದ ಬಾಂಬ್, ನಟ-ನಟಿಯರ ಮದುವೆಗಳಿಗೂ ಬಿಸಿ ತಟ್ಟಿದೆ.
ಡ್ರಗ್ಸ್ ವಿಚಾರ ಬೆಳಕಿಗೆ ಬರುತ್ತಿದ್ದಂತೆ ನನ್ನ ಮದುವೆಯೂ ಮುರಿದು ಬಿದ್ದಿದೆ ಎಂದು ಗೂಳಿಹಟ್ಟಿ ಚಿತ್ರದ ನಾಯಕ ನಟ ಪವನ್ ಅಳಲು ತೋಡಿಕೊಂಡಿದ್ದಾರೆ.
ನನ್ನ ಮದುವೆ ಆಗೋದು ಡೌಟು ಎಂದು ಖುದ್ದು ಪವನ್ ಹೇಳಿಕೊಂಡಿದ್ದು, ಚಿತ್ರಗಳಲ್ಲಿ ನಟನೆ ಮಾಡುವುದೇ ಅಪರಾಧ ಎಂಬ ಭಾವನೆ ಜನರಲ್ಲಿ ಮೂಡಲು ಆರಂಭವಾಗಿದೆ ಎಂದಿದ್ದಾರೆ.
ನಮ್ಮ ಮನೆಯವರು ಚಿತ್ರರಂಗದ ಸಹವಾಸ ಸಾಕು, ಮನೆಗೆ ಬಾ ಎಂದು ಹೇಳುತ್ತಿದ್ದಾರೆ. ನಮ್ಮ ಇಂಡಸ್ಟ್ರೀಯವರೇ ಡ್ರಗ್ಸ್ ದಂಧೆ ಬಗ್ಗೆ ಹೇಳಿದ ಮೇಲೆ ಇನ್ನೇನು ಬೇಕು. ಹೀಗಾಗಿ ನನ್ನ ಮದುವೆ ಆಗೋದು ಅನುಮಾನ ಎಂದು ಪವನ್ ತಿಳಿಸಿದ್ದಾರೆ.
ನಾನು ಸ್ಯಾಂಡಲ್‍ವುಡ್‍ನಲ್ಲಿ ಕೆಲಸ ಮಾಡೋದೆ ತಪ್ಪು ಎನ್ನುವ ಭಾವನೆ ಮೂಡುತ್ತಿದೆ. ಚಿತ್ರಗಳಲ್ಲಿ ನಟನೆ ಮಾಡುವ ಎಲ್ಲರೂ ಡ್ರಗ್ಸ್, ಗಾಂಜಾ ತಗೋತಾರೆ ಎಂಬ ಭಾವನೆ ಜನರಲ್ಲಿ ಬರುತ್ತೆ. ಶೋಕಿ ಮಾಡಲು ಸಾವಿರಾರು ದಾರಿಗಳಿವೆ. ಈ ಕ್ಷೇತ್ರಕ್ಕೆ ಬಂದ ಮೇಲೆ ಸಾಧನೆ ಮಾಡಬೇಕು. ಹಿರಿಯರ ಮಾರ್ಗದಶನದಲ್ಲಿ ಸಾಧನೆ ಮಾಡಬೇಕು ಎಂಬುದು ನಮ್ಮ ಭಾವನೆ ಎಂದಿದ್ದಾರೆ ಯುವ ನಟ ಪವನ್.