ಮದುವೆಯಾದ 7 ವರ್ಷದ ನಂತರ ಪತ್ನಿಗೆ ಆಕೆಯ ಪ್ರಿಕರನ ಜೊತೆ ಮದುವೆ ಮಾಡಿಸಿದ ವ್ಯಕ್ತಿ..!
ಬಿಹಾರ : ಕೆಲವೊಮ್ಮೆ ಪ್ರೇಮಿಗಳು ಮನೆಯವರ ವಿರೋಧದಿಂದಲೋ ಅಥವ ಬೇರೆ ಕಾರಣಗಳಿಂದಲೂ ದೂರವಾಗುತ್ತಾರೆ. ತಮಗೆ ಇಷ್ಟವಿಲ್ಲದೇ ಇದ್ದರೂ ಅನಿವಾರ್ಯವಾಗಿ ಬೇರೆಯವರನ್ನ ಮದುವೆಯಾಗಿ ಜೀವನ ನಡೆಸುತ್ತಿರುತ್ತಾರೆ. ಹೆಚ್ಚಾಗಿ ಪ್ರೇಮಿಗಳು ಪ್ರೀತಿಯನ್ನ ತ್ಯಾಗ ಮಾಡ್ತಾರೆ. ಆದ್ರೆ ಇಲ್ಲೊಬ್ಬ ಪತಿ ತನ್ನ ಪತ್ನಿಯನ್ನೇ ತ್ಯಾಗ ಮಾಡಿ ಪ್ರೀತಿ ಮಧುರ ತ್ಯಾಗ ಅಮರ ಎಂಬ ಸಿದ್ಧಾಂತದಂತೆ ನಡೆದುಕೊಂಡಿದ್ದಾನೆ. ಹೌದು ಮದುವೆಯಾಗಿ 7 ವರ್ಷದಿಂದ ಸಂಸಾರ ನಡೆಸುತ್ತಿದ್ದ ಗಂಡ ಸ್ವತಃ ಆತನ ಪತ್ನಿಗೆ ಆಕೆಯ ಪ್ರಿಯಕರನ ಜೊತೆಗೆ ಮದುವೆ ಮಾಡಿಸಿದ್ದಾನೆ. ಈ ಘಟನೆ ಬಿಹಾರದ ಸುಲ್ತಾನಪುರದಲ್ಲಿ ನಡೆದಿದೆ.
ಸುಲ್ತಾನ್ ಪುರ ನಿವಾಸಿ ಉತ್ತಮ್ ಮಂಡಲ್ ಕಳೆದ 7 ವರ್ಷಗಳ ಹಿಂದೆ ಸಪ್ನಾ ಎಂಬ ಯುವತಿಯನ್ನು ಮದುವೆಯಾಗಿದ್ದ. ಆದರೆ ಮದುವೆಯಾದ ಮೇಲೆ ಸಪ್ನಾಳಿಗೆ ಬೇರೊಬ್ಬ ಯುವಕನೊಂದಿಗೆ ಪ್ರೀತಿ ಹುಟ್ಟಿದೆ. ರಾಜ್ ಕುಮಾರ್ ಹೆಸರಿನ ಯುವಕನೊಂದಿಗೆ ಪ್ರೀತಿ ಗಾಢವಾಗಿ ಬೆಳೆದಿದೆ. ಈ ವಿಚಾರ ತಿಳಿದ ನಂತರ ಉತ್ತಮ್ ಆಕೆಯೊಂದಿಗೆ ಜಗಳವಾಡಿದ್ದಾನೆ. ಆದರೆ ಎಷ್ಟೆಂದರೂ ಕೇಳದ ಸ್ವಪ್ನಾ ಅವನನ್ನೇ ಪ್ರೀತಿಸುವುದಾಗಿ ವಾದಿಸಿದ್ದಾಳೆ.
ಸ್ವಪ್ನಾಳ ತಂದೆ ತಾಯಿಗೂ ಈ ವಿಚಾರ ತಿಳಿಸಿದ ಉತ್ತಮ್, ಆಕೆಗೆ ಬುದ್ಧಿ ಹೇಳಿಸುವ ಪ್ರಯತ್ನ ಮಾಡಿದ್ದಾನೆ. ಯಾವುದಕ್ಕೂ ಬಗ್ಗದಿದ್ದಾಗ ಖುದ್ದು ತಾನೇ ಆಕೆಗೆ ಮತ್ತೊಂದು ಮದುವೆ ಮಾಡಿಸುವ ನಿರ್ಧಾರ ಮಾಡಿದ್ದಾನೆ. ಮನೆ ಹತ್ತಿರದ ದುರ್ಗಾ ಸ್ಥಳದಲ್ಲಿ ರಾಜ್ಕುಮಾರ್ ಮತ್ತು ಸ್ವಪ್ನಾ ಮದುವೆ ಮಾಡಿಸಿದ್ದಾನೆ. ಉತ್ತಮ್ ಸ್ವಪ್ನಾ ದಂಪತಿಗೆ ಇಬ್ಬರು ಮಕ್ಕಳಿದ್ದು, ಇದೀಗ ಆ ಇಬ್ಬರು ಮಕ್ಕಳು ತಂದೆಯೊಂದಿಗೆ ಇದ್ದಾರೆ.
ಒಟ್ಟಾರೆ ವಿವಾಹವಾಗಿ 7 ವರ್ಷಗಳಾದ ಮೇಲೆ ಅದ್ರಲ್ಲೂ ಇಬ್ಬರು ಮಕ್ಕಳಾದ ನಂತರ ಮಹಿಳೆಗೆ ಮತ್ತೊಬ್ಬನ ಮೇಲಿನ ಪ್ರೇಮದ ಗಾಢತೆ ಅರಿತ ಪತಿಯ ತ್ಯಾಗ ನಿಜಕ್ಕೂ ಶ್ಲಾಘನೀಯವೇ.. ಆದ್ರೆ ಮಹಿಳೆ ಮಾಡಿದ್ದು ಸರಿನಾ ಎನ್ನುವ ಪ್ರಶ್ನೆಯೂ ಸಹ ಕಾಡದೇ ಇರೋದಿಲ್ಲ.