ಕೊರೋನಾ ಸೋಂಕಿತ ಗರ್ಭಿಣಿಗೆ ಹೆರಿಗೆ – ತಾಯಿ ಮಗು ಆರೋಗ್ಯ
ಮಂಗಳೂರು, ಜೂನ್ 12: ಮಂಗಳೂರು ಜಿಲ್ಲಾ ಕೊರೊನಾ ವೆನ್ಲಾಕ್ ಆಸ್ಪತ್ರೆಯಲ್ಲಿ, ಕೊರೊನಾ ಸೋಂಕಿತ ಗರ್ಭಿಣಿಗೆ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.
ಇವರು ಮುಂಬೈನಿಂದ ಮಂಗಳೂರಿಗೆ ಬಂದಿದ್ದು, ತಪಾಸಣೆ ವೇಳೆ ಇವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಮಂಗಳೂರು ಸಮೀಪದ ಹಳ್ಳಿಯೊಂದರ ನಿವಾಸಿಯಾದ ಇವರು ಸೋಮವಾರ ಮುಂಬೈನಿಂದ ಮಂಗಳೂರಿಗೆ ಬಂದಿದ್ದರು. ತುಂಬಾ ನಿಶ್ಯಕ್ತಿಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಇವರು ಮಂಗಳವಾರ ನಗರದ ಲೇಡಿಗೋಶನ್ ಆಸ್ಪತ್ರೆಗೆ ವೈದ್ಯರ ತಪಾಸಣೆಗೆಂದು ಬಂದಿದ್ದರು. ಕೊರೋನಾ ಪರೀಕ್ಷೆಗೆ ಒಳಪಡಿಸಿದ ನಂತರ ಮುಂಬೈನಿಂದ ವಾಪಸಾಗಿದ್ದ ಹಿನ್ನಲೆಯಲ್ಲಿ ಆಸ್ಪತ್ರೆಯ ವೈದ್ಯರು ಅವರನ್ನು ಆಸ್ಪತ್ರೆಯಲ್ಲೇ ಕ್ವಾರಂಟೈನ್ ಗೆ ಒಳಪಡಿಸಿದ್ದರು. ಬುಧವಾರ ಅವರ ಗಂಟಲು ದ್ರವ ಪರೀಕ್ಷಾ ವರದಿ ಬಂದಿದ್ದು, ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ನಂತರ ಅವರನ್ನು ಪ್ರತ್ಯೇಕ ವಾರ್ಡ್ ಗೆ ಸ್ಥಳಾಂತರಿಸಿದ್ದು, ಗುರುವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ನುರಿತ ತಜ್ಞರ ತಂಡ ಸಿಸೇರಿಯನ್ ಮೂಲಕ ಸುಸೂತ್ರ ಹೆರಿಗೆ ಮಾಡಿಸಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.
ಮಗು ಆರೋಗ್ಯವಾಗಿದ್ದು, ತಾಯಿಗೆ ಬಿಪಿ ಮತ್ತು ದೇಹದಲ್ಲಿ ನೀರು ಕಡಿಮೆ ಇದ್ದ ಕಾರಣ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಿಸೇರಿಯನ್ ಹೆರಿಗೆ ಮಾಡಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.








