ರಾಯಚೂರು: ಜಿಲ್ಲೆಯ ಏಗನೂರು (Eganur) ಗ್ರಾಮದ ಹತ್ತಿರದ ಮೃತ್ಯುಂಜಯ ಮಠ ಹಾಗೂ ಗೋಶಾಲೆಯನ್ನು ಅಧಿಕಾರಿಗಳು ಬೆಳ್ಳಂ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.
ಸುಮಾರು 4 ಎಕರೆ ಸರ್ಕಾರಿ ಜಾಗದಲ್ಲಿ ಮಠ, ಗೋಶಾಲೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದ 10 ವರ್ಷಗಳಿಂದ ಸರ್ಕಾರಿ ಜಾಗದಲ್ಲಿ ಮೃತ್ಯುಂಜಯ ಮಠ ನಡೆಸುತ್ತಿರುವ ಜ್ಞಾನಾನಂದಸ್ವಾಮಿ ಕುಂಭಮೇಳಕ್ಕೆ ಹೋಗಿದ್ದು, ರಾಯಚೂರು ಎಸಿ ಗಜಾನನ ಬಾಳೆ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಜಿಲ್ಲಾಧಿಕಾರಿ ನಿತೀಶ್.ಕೆ ಆದೇಶದ ಮೇರೆಗೆ ಮಠ ತೆರವಿಗೆ ಅಧಿಕಾರಿಗಳು ಮುಂದಾಗಿದ್ದು, ಇಲ್ಲಿನ ಕಟ್ಟಡಗಳು, ಗೋಶಾಲೆ ತೆರವು ಮಾಡಲಾಗಿದೆ.
ರಾಜೀವ್ ಗಾಂಧಿ ವಸತಿ ಯೋಜನೆಗೆ ಮಂಜೂರಾದ ಜಾಗದಲ್ಲಿರುವ ಮಠ ತೆರವಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. 60ಕ್ಕೂ ಅಧಿಕ ಗೋವುಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ.








