ಐಪಿಎಲ್ ನಲ್ಲಿ ಸಕ್ಸಸ್ ಗೆ ಕಾರಣ ಬಿಚ್ಚಿಟ್ಟ ಮ್ಯಾಕ್ಸಿ
ಮೆಲ್ಬೋರ್ನ್ : ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಅಭಿಮಾನಿಗಳು ನಿರಾಸೆ ಅನುಭವಿಸಿದ್ರೂ ಒಂದು ವಿಚಾರದಲ್ಲಿ ಮಾತ್ರ ದಿಲ್ ಖುಷ್ ಆಗಿದ್ದರು. ಪ್ರತಿ ಬಾರಿಗಿಂತಲೂ ಆರ್ ಸಿಬಿಯನ್ಸ್ ಈ ಬಾರಿ ತುಸು ಗಟ್ಟಿಯಾಗಿಯೇ ಈ ಸಲ ಕಪ್ ನಮ್ದೆ ಅನ್ನುತ್ತಿದ್ದರು. ಅದಕ್ಕೆ ಕಾರಣ ಮ್ಯಾಡ್ ಮ್ಯಾಕ್ಸಿ..!
ಹೌದು..! ಇದೇ ಮೊದಲ ಬಾರಿಗೆ ಮ್ಯಾಕ್ಸ್ ವೆಲ್ ಆರ್ ಸಿಬಿ ಪರ ಆಡಿದರು. ಮ್ಯಾಕ್ಸಿಗೆ ಆರ್ ಸಿಬಿಯನ್ಸ್ ರೆಡ್ ಕಾರ್ಪೆಟ್ ಹಾಕಿ ಬರಮಾಡಿಕೊಂಡಿದ್ದರು. ಅಲ್ಲದೆ ಬೆಟ್ಟದಷ್ಟು ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದರು. ಆ ನಿರೀಕ್ಷೆಗೆ ತಕ್ಕಂತೆ ಮ್ಯಾಕ್ಸಿ ಬ್ಯಾಟ್ ಬೀಸಿ ಆರ್ ಸಿಬಿ ಅಭಿಮಾನಿಗಳ ಹೃದಯ ಗೆದ್ದರು.
2020ರ ಆವೃತ್ತಿಯಲ್ಲಿ ಪಂಜಾಬ್ ತಂಡದಲ್ಲಿ ಭಾರಿ ವೈಫಲ್ಯ ಅನುಭವಿಸಿದ್ದ ಮ್ಯಾಕ್ಸ್ ವೆಲ್ 2021ರನಲ್ಲಿ 42.75ರ ಸರಾಸರಿಯಲ್ಲಿ 144.10 ಸ್ಟ್ರೈಕ್‍ರೇಟ್‍ನಲ್ಲಿ 513 ರನ್‍ಗಳಿಸಿ ಆರ್ ಸಿಬಿಯ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಈ ಬಾರಿ ಆರ್ ಸಿಬಿ ಪ್ಲೇ ಆಫ್ ತಲುಪುವಲ್ಲಿ ಮ್ಯಾಕ್ಸ್ ವೆಲ್ ಪ್ರದರ್ಶನ ಪ್ರಮುಖವಾಗಿತ್ತು.
ಐಪಿಎಲ್ ನಲ್ಲಿ ಮ್ಯಾಕ್ಸಿ ಪ್ರದರ್ಶನ ಎಲ್ಲರ ಹೃದಯ ಗೆದ್ದಿತ್ತು. ಮುಖ್ಯವಾಗಿ ಮ್ಯಾಕ್ಸ್ ವೆಲ್ ಬ್ಯಾಟಿಂಗ್ ನಲ್ಲಿ ಒಂದಿಷ್ಟು ಬದಲಾವಣೆಗಳು ಕಂಡವು. ಇದೀಗ ಈ ಬಗ್ಗೆ ಮ್ಯಾಕ್ಸ್ ವೆಲ್ ಮಾತನಾಡಿದ್ದು, ಮುಕ್ತಕಂಠದಿಂದ ವಿರಾಟ್ ಮತ್ತು ಎಬಿಡಿ ವಿಲಿಯರ್ಸ್ ಅವರನ್ನ ಹೊಗಳಿದ್ದಾರೆ.
ಹೌದು..! ಸಂದರ್ಶನವೊಂದರಲ್ಲಿ ಮಾತನಾಡಿರುವ ಮ್ಯಾಕ್ಸಿ, ತಾವು ಫಾರ್ಮ್ ಗೆ ಮರಳಲು ಕಾರಣ ತಂಡದ ಸಹ ಆಟಗಾರರಾದ ಎಬಿ ಡಿ ವಿಲಿಯರ್ಸ್ ಮತ್ತು ನಾಯಕ ವಿರಾಟ್ ಕೊಹ್ಲಿ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಡಿವಿಲಿಯರ್ಸ್ ಜೊತೆಗೆ ತರಬೇತಿ ನಡೆಸುತ್ತಾ ಸಮಯ ಕಳೆಯುತ್ತಿದ್ದರೆ ನನಗೆ 10 ಅಡಿ ಎತ್ತರದಲ್ಲಿ ಇದ್ದೇನೆ ಎಂಬ ಭಾವನೆ ವ್ಯಕ್ತವಾಗುತ್ತಿತ್ತು. ಪ್ರತಿದಿನವೂ ನಾನು ಏನಾದರೂ ಹೊಸದನ್ನು ಕಂಡುಕೊಳ್ಳುತ್ತಿದ್ದೆ. ನಾನು ವಿರಾಟ್ ಮತ್ತು ಎಬಿ ಜೊತೆಗೆ ಉತ್ತಮವಾಗಿ ಹೊಂದಿಕೊಂಡಿದ್ದೆ. ಇಬ್ಬರು ಅತ್ಯುತ್ತಮ ಬ್ಯಾಟಿಂಗ್ ಶ್ರೇಷ್ಠರು ಇದ್ದ ತಂಡದಲ್ಲಿ ನಾನು ಅವಕಾಶ ಪಡೆದಿದ್ದಕ್ಕೆ ಅತ್ಯಂತ ಅದೃಷ್ಠಶಾಲಿಯಾಗಿದ್ದೆ. ಅವರೊಂದಿಗೆ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಆಟದ ಬಗ್ಗೆ ಮಾತನಾಡಲು ನಾನು ಮುಕ್ತನಾಗಿದ್ದೇನೆ ಎಂದು 33 ವರ್ಷದ ಆಲ್ ರೌಂಡರ್ ಹೇಳಿಕೊಂಡಿದ್ದಾರೆ.