ಹೈದರಾಬಾದ್ : ಜಗತ್ತನ್ನೇ ಬುಡಮೇಲು ಮಾಡಿರುವ ಕೊರೊನಾ ವೈರಸ್ ಗೆ ಕಡಿವಾಣ ಹಾಕಲು ವಿಶ್ವದ ಹಲವೆಡೆ ಔಷಧಿಗಳನ್ನು ಕಂಡು ಹಿಡಿಯುವ ಪ್ರಯತ್ನ ಸಾಗುತ್ತಿದೆ. ಈ ನಡುವೆ ಭಾರತದ ಕಂಪನಿಯೊಂದು ಲಸಿಕೆಯನ್ನು ಕಂಡು ಹಿಡಿದಿದ್ದು ರೋಗಿಗಳ ಮೇಲೆ ಪ್ರಯೋಗ ನಡೆಸಲು ಅನುಮತಿ ಪಡೆದುಕೊಂಡಿದೆ. ಹೈದರಾಬಾದ್ ನ ಭಾರತ್ ಬಯೋಟಿಕ್ ಕಂಪನಿ ‘ಕೊವಾಕ್ಸಿನ್’ ಎಂಬ ಹೆಸರಿನಲ್ಲಿ ಲಸಿಕೆ ಕಂಡು ಹಿಡಿದಿದೆ. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ಮತ್ತು ರಾಷ್ಟ್ರೀಯ ವೈರಾಲಜಿ ಇನ್ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು, ನಾಳೆ ಮನುಷ್ಯರ ಮೇಲೆ ಪ್ರಯೋಗ ನಡೆಯಲಿದೆ ಎಂದು ತಿಳಿದು ಬಂದಿದೆ.
ಕೊವಾಕ್ಸಿನ್ ಪ್ರಯೋಗಕ್ಕೆ ಕೇಂದ್ರ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ(ಸಿಡಿಎಸ್ಸಿಒ) ಡಿಜಿಸಿಐ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜುಲೈನಲ್ಲಿ ಭಾರತಾದ್ಯಂತ ಮನುಷ್ಯರ ಮೇಲೆ ಟ್ರಯಲ್ ನಡೆಯಲಿದೆ.
ಈ ಕುರಿತು ಭಾರತ್ ಬಯೋಟಿಕ್ ಕಂಪನಿಯ ಆಡಳಿತ ನಿರ್ದೇಶಕ ಕೃಷ್ಣ ಪ್ರತಿಕ್ರಿಯಿಸಿ, ಕೊವಾಕ್ಸಿನ್ ದೇಶದ ಮೊದಲ ಕೋವಿಡ್ 19 ಔಷಧಿ ಎಂದು ಹೇಳಲು ಬಹಳ ಹೆಮ್ಮೆ ಆಗುತ್ತದೆ ಎಂದು ತಿಳಿಸಿದ್ದಾರೆ.